ಬೆಂಗಳೂರು : ನಗರದ ಪ್ರತಿಷ್ಠಿತ ಶಾಲೆಯೊಂದಕ್ಕೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಒಡ್ಡಿರುವ ಘಟನೆ ಮಂಗಳವಾರ ನಡೆದಿದೆ. ವರ್ತೂರು ಸಮೀಪದಲ್ಲಿರುವ ಕ್ರೈಸಾಲಿಸ್ ಶಾಲೆಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಇ-ಮೇಲ್ ಮೂಲಕ ಬೆದರಿಕೆ ಪತ್ರ ರವಾನಿಸಲಾಗಿದೆ.
ಶಾಲೆಯ ಆಡಳಿತ ಮಂಡಳಿ ಮುಂಜಾಗರೂಕತಾ ಕ್ರಮವಾಗಿ ಮಕ್ಕಳಿಗೆ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ.
ವರ್ತೂರು ಠಾಣೆಯ ಪೊಲೀಸರು ಸುದ್ದಿ ತಿಳಿದ ಕೂಡಲೇ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಡನೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ವರ್ತೂರು ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇತ್ತೀಚಿಗೆ ಬಾಂಬ್ ಬೆದರಿಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು ದೆಹಲಿ, ಚೆನ್ನೈ ಮತ್ತು ಮುಂಬೈನಲ್ಲಿಯೂ ಇದೇ ರೀತಿ ಪ್ರಕರಣಗಳು ಕಂಡು ಬರುತ್ತಿವೆ.
ಇದನ್ನೂ ಓದಿ : ಮುಂಬೈ ಇಸ್ಕಾನ್ ದೇಗುಲಕ್ಕೆ ಬಾಂಬ್ ಬೆದರಿಕೆ
ಎಲ್ಲಾ ಪ್ರಕರಣಗಳೂ ಸಹ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳಾಗಿದ್ದು, ನಿನ್ನೆಯಷ್ಟೇ ಮುಂಬೈನ ಇಸ್ಕಾನ ದೇಗುಲಕ್ಕೆ ಬಾಂಬ್ ಬೆದರಿಕೆ ಒಡ್ಡಲಾಗಿತ್ತು.
ಇತ್ತೀಚಿಗಷ್ಟೇ ಬೆಂಗಳೂರಿನ ಹಲವು ಶಾಲೆಗಳಿಗೆ ಇಮೇಲ್ ಮುಖಾಂತರ ಬಾಂಬ್ ಬೆದರಿಕೆ ಹಾಕಲಾಗಿತ್ತು. ಪರಿಶೀಲನೆಯ ಬಳಿಕ ಇದು ಹುಸಿ ಬೆದರಿಕೆ ಎಂದು ತಿಳಿದುಬಂದಿತ್ತು. ದುಷ್ಕರ್ಮಿಗಳು ವಿದೇಶದ ಸರ್ವರ್ ಹಾಗೂ ಪ್ರಾಕ್ಸಿ ಬಳಸಿ ಇ ಮೇಲ್ ಗಳನ್ನು ರವಾನಿಸುತ್ತಿರುವುದರಿಮದ ಅವರ ಪತ್ತೆ ಪೊಲೀಸರಿಗೂ ತ್ರಾಸದಾಯಕವಾಗಿ ಪರಿಣಮಿಸಿದೆ. ಇವರ ಪತ್ತೆಯ ನೆರವಿಗೆ ಪೊಲೀಸರು ಗೂಗಲ್ ಹಾಗೂ ಮೆಟಾ ಸಂಸ್ಥೆಯ ನೆರವು ಯಾಚಿಸಿದ್ದಾರೆ.