ಬೆಂಗಳೂರು: ಭಾರತದ ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ (Bengaluru) ಮೂರು ದೇಶಗಳ ರಾಯಭಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ (Bomb Threat) ಇಮೇಲ್ ಬಂದಿರುವ ಘಟನೆ ಆತಂಕ ಮೂಡಿಸಿದೆ. ಜಪಾನ್, ಇಸ್ರೇಲ್, ಮತ್ತು ನೆದರ್ಲ್ಯಾಂಡ್ ದೇಶಗಳ ರಾಯಭಾರಿ ಕಚೇರಿಗಳಿಗೆ ಈ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು.
ಇಮೇಲ್‌ನಲ್ಲಿ ಕಚೇರಿಗಳಲ್ಲಿ RDX ಸೇರಿದಂತೆ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಹೇಳಲಾಗಿತ್ತು. ಈ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಚೇರಿ ಆವರಣದಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದ ಕಾರಣ ಇದು ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಘಟನೆಯ ನಂತರ ಈ ಇಮೇಲ್‌ಗಳನ್ನು ಸೈಬರ್ ಕ್ರೈಂ ವಿಭಾಗಕ್ಕೆ ಕಳುಹಿಸಿ ತನಿಖೆ ಆರಂಭಿಸಲಾಗಿದೆ. ಕೆಲವು ಇಮೇಲ್‌ಗಳು ಒಂದೇ ಐಡಿಯಿಂದ ಕಳುಹಿಸಲ್ಪಟ್ಟಿರುವುದರಿಂದ ಇದರ ಹಿಂದೆ ಒಬ್ಬ ವ್ಯಕ್ತಿ ಅಥವಾ ಸಂಘಟಿತ ಗುಂಪಿನ ಕೈವಾಡವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಜಗತ್ತಿನಲ್ಲಿ ನಡೆಯುತ್ತಿರುವ ಇಸ್ರೇಲ್ ಇರಾನ್ ಉದ್ವಿಗ್ನದ ಹಿನ್ನೆಲೆ ಈ ಘಟನೆ ನಡೆದಿದೆ ಎಂಬುದು ಗಮನಾರ್ಹ. ಇಸ್ರೇಲ್ ಸಂಬಂಧಿತ ಕಚೇರಿಗಳಿಗೆ ವಿಶ್ವದ ಹಲವೆಡೆ ಬೆದರಿಕೆಗಳು ಹೆಚ್ಚುತ್ತಿರುವುದಾಗಿ ವರದಿಯಾಗಿದೆ.