ಉತ್ತರ ಕನ್ನಡ: ದೇಶದಲ್ಲಿ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ 2007ರಲ್ಲಿ ಬಂಧನಕ್ಕೊಳಗಾಗಿದ್ದ ಭಟ್ಕಳದ ಅಬ್ದುಲ್ ವಾಹಿದ್ ಸಿದ್ಧಿಬಪ್ಪ ಆರೋಪಗಳಿಂದ ಮುಕ್ತವಾಗಿದ್ದಾನೆ.
ಪ್ರಕರಣದಲ್ಲಿ ವಿಚಾರಣೆ ನಡೆಸಿದ ದೆಹಲಿಯ ಪಟಿಯಾಲಾ ಹೌಸ್ ಸೆಷನ್ಸ್ ಕೋರ್ಟ್, ಸುದೀರ್ಘ ಏಳು ವರ್ಷಗಳ ವಿಚಾರಣೆ ಬಳಿಕ ಅಬ್ದುಲ್ ನನ್ನು ಆರೋಪಮುಕ್ತಗೊಳಿಸಿ ತೀರ್ಪು ನೀಡಿದೆ. ಅಬ್ದುಲ್ ವಿರುದ್ಧ 2007ರಿಂದ ನಿಷೇಧಿತ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ಸೇರಿ ದೇಶದ ವಿವಿಧೆಡೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪವಿತ್ತು. ಈ ಸಂಬಂಧ ಅಬ್ದುಲ್ ವಾಹಿದ್ ನನ್ನು 2016ರ ಮೇ 20ರಂದು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಈತ ಮುಜಾಹಿದ್ದೀನ್ ಮುಖ್ಯಸ್ಥ ಯಾಸೀನ್ ಭಟ್ಕಳ್ ಸಂಬಂಧಿ ಎನ್ನಲಾಗಿದೆ.
ಮುಜಾಹಿದ್ದಿನ್ ಸಂಘಟನೆಗೆ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ದಂದೆ, ಜೊತೆಗೆ ಮುಂಬೈ ಅಟ್ಯಾಕ್, ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್ನಲ್ಲಿ ಸಹ ಈತನ ಕೈವಾಡ ಇರುವ ಕುರಿತು ಎನ್‌ಐಎ ಪ್ರಕರಣ ದಾಖಲಿಸಿತ್ತು. ಆದರೆ ಎನ್‌ಐಎ ದಾಖಲಿಸಿದ್ದ ದೂರಿನಲ್ಲಿ ಸಾಕ್ಷಿ ಕೊರತೆ ಹಿನ್ನಲೆಯಲ್ಲಿ ಪ್ರಕರಣ ರದ್ದು ಮಾಡಲಾಗಿದೆ.