ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಪರಿಸರಸ್ನೇಹಿ ಮತ್ತು ಆರಾಮದಾಯಕ ಪ್ರಯಾಣದ ಭರವಸೆ ನೀಡಿ ರಸ್ತೆಗಿಳಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಎಲೆಕ್ಟ್ರಿಕ್ ಬಸ್‌ಗಳು (E-Buses) ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿವೆ. ನಗರದಲ್ಲಿ ಸರಣಿ ಇ-ಬಸ್ ಅಪಘಾತಗಳು ಸಂಭವಿಸುತ್ತಿರುವುದು ಪ್ರಯಾಣಿಕರ ನಿದ್ದೆಗೆಡಿಸಿದೆ. ಹಾಗಾದರೆ, ಅತ್ಯಾಧುನಿಕ ತಂತ್ರಜ್ಞಾನದ ಈ ಬಸ್‌ಗಳು ಇಷ್ಟೊಂದು ಅಪಘಾತಕ್ಕೀಡಾಗುತ್ತಿರುವುದರ ಹಿಂದಿನ ಅಸಲಿ ಕಾರಣಗಳೇನು?
ಮೆಟ್ರೋ ಸಿಟಿಯಲ್ಲಿ ಇ–ಬಸ್ ಸಾಮ್ರಾಜ್ಯ
ಬೆಂಗಳೂರಿನಲ್ಲಿ ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ದೊಡ್ಡ ಮಟ್ಟದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೆ ತರಲಾಗಿದೆ. ಸದ್ಯ ನಗರದ ರಸ್ತೆಗಳಲ್ಲಿ ಸುಮಾರು 1,650 ರಿಂದ 1,700 ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿವೆ. ಈ ಬಸ್‌ಗಳನ್ನು ಓಡಿಸಲು ಸರಿಸುಮಾರು 3,000 ಚಾಲಕರನ್ನು ನಿಯೋಜಿಸಲಾಗಿದೆ. ಇಷ್ಟು ಬೃಹತ್ ಸಂಖ್ಯೆಯಲ್ಲಿ ಇ-ಬಸ್‌ಗಳು ರಸ್ತೆಗಿಳಿದಿದ್ದರೂ, ಚಾಲಕರ ನೇಮಕಾತಿ ಮತ್ತು ಸುರಕ್ಷತೆಯ ವಿಚಾರದಲ್ಲಿ ಮಾತ್ರ ದೊಡ್ಡ ಮಟ್ಟದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಅಪಘಾತಗಳಿಗೆ ಮುಖ್ಯ ಕಾರಣಗಳೇನು?
- ನೇಮಕಾತಿ ನಿಯಮಗಳ ಉಲ್ಲಂಘನೆ:
ಸಾಮಾನ್ಯವಾಗಿ ಬಿಎಂಟಿಸಿ ಅಥವಾ ಕೆಎಸ್‌ಆರ್‌ಟಿಸಿಯಲ್ಲಿ ಕಾಯಂ ಚಾಲಕರನ್ನು ತಗೆದುಕೊಳ್ಳುವಾಗ ಅತ್ಯಂತ ಕಠಿಣ ಚಾಲನಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆದರೆ, ಇ-ಬಸ್ ಚಾಲಕರ ನೇಮಕಾತಿಯಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೇವಲ ಚಾಲನಾ ಪರವಾನಗಿ (Driving License) ಮತ್ತು ಕನಿಷ್ಠ 3 ವರ್ಷದ ಡ್ರೈವಿಂಗ್ ಅನುಭವದ ದಾಖಲೆ ಇದ್ದರೆ ಸಾಕು, ಅಂತವರಿಗೆ ನೇರವಾಗಿ ಬಸ್ ಓಡಿಸಲು ಜವಾಬ್ದಾರಿ ನೀಡಲಾಗುತ್ತಿದೆ.
- ತರಬೇತಿಯ ತೀವ್ರ ಕೊರತೆ:
ಸಾಮಾನ್ಯ ಬಿಎಂಟಿಸಿ ಚಾಲಕರಿಗೆ ಸಂಸ್ಥೆಯಿಂದ ಕನಿಷ್ಠ 6 ತಿಂಗಳ ಕಾಲ ಕಠಿಣ ತರಬೇತಿ ನೀಡಿ, ಬೆಂಗಳೂರಿನ ಟ್ರಾಫಿಕ್‌ನಲ್ಲಿ ಬಸ್ ನಿಯಂತ್ರಿಸುವುದು ಹೇಗೆ ಎಂದು ಕಲಿಸಲಾಗುತ್ತದೆ. ಆದರೆ, ಇ-ಬಸ್ ಚಾಲಕರಿಗೆ ಇಂತಹ ಯಾವುದೇ ಅಧಿಕೃತ ದೀರ್ಘಾವಧಿ ತರಬೇತಿ ಇರುವುದಿಲ್ಲ. ಕೇವಲ ಕೆಲವೇ ಕೆಲವು ಚಾಲಕರಿಗೆ ಮಾತ್ರ ಕೇವಲ 15 ದಿನಗಳ ಅಲ್ಪಾವಧಿ ತರಬೇತಿ ನೀಡಿ ನೇರವಾಗಿ ಬಸ್ ನೀಡಲಾಗುತ್ತಿದೆ.
- ಸಿಟಿ ರಸ್ತೆಗಳ ಅನುಭವ ಇಲ್ಲದಿರುವುದು:
ಇ-ಬಸ್ ಚಾಲನೆಗೆ ಬರುತ್ತಿರುವ ಬಹುತೇಕ ಚಾಲಕರಿಗೆ ಬೆಂಗಳೂರಿನಂತಹ ಜನನಿಬಿಡ ಮತ್ತು ಸದಾ ಗಿಜಿಗುಡುವ ರಸ್ತೆಗಳಲ್ಲಿ ಭಾರೀ ವಾಹನಗಳನ್ನು ಚಲಾಯಿಸಿದ ಅನುಭವ ಇರುವುದಿಲ್ಲ. ಹೀಗಾಗಿ ಸಿಟಿಯ ಟ್ರಾಫಿಕ್ ನಿರ್ವಹಣೆ ಮತ್ತು ತುರ್ತು ಸಂದರ್ಭಗಳಲ್ಲಿ ದಿಢೀರ್ ಬ್ರೇಕ್ ಹಾಕುವುದು ಇವರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.
- ಹೆಲ್ತ್ ಫಿಟ್ನೆಸ್ ಸರ್ಟಿಫಿಕೇಟ್ ಕೂಡ ಕೇಳಲ್ಲ!
ಸಾರ್ವಜನಿಕರ ಜೀವದ ಜವಾಬ್ದಾರಿ ಹೊರುವ ಚಾಲಕರಿಗೆ ದೃಷ್ಟಿದೋಷ, ಬಿಪಿ, ಶುಗರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿವೆಯೇ ಎಂದು ತಪಾಸಣೆ ನಡೆಸುವುದು ಕಡ್ಡಾಯ. ಆದರೆ, ಈ ಎಲೆಕ್ಟ್ರಿಕ್ ಬಸ್ ಚಾಲಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಕನಿಷ್ಠ ‘ಹೆಲ್ತ್ ಫಿಟ್ನೆಸ್ ಸರ್ಟಿಫಿಕೇಟ್’ ಅನ್ನೂ ಕೂಡ ಪರಿಶೀಲಿಸುತ್ತಿಲ್ಲ ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ.
ಸಾಮಾನ್ಯ ಡೀಸೆಲ್ ಬಸ್‌ಗಳಿಗಿಂತ ಎಲೆಕ್ಟ್ರಿಕ್ ಬಸ್‌ಗಳ ವೇಗ (Speed) ಮತ್ತು ಪಿಕ್-ಅಪ್ (Pick-up) ತೀರಾ ಹೆಚ್ಚಿರುತ್ತದೆ. ಇಂತಹ ಅತ್ಯಾಧುನಿಕ ಬಸ್‌ಗಳನ್ನು ನಿಯಂತ್ರಿಸಲು ನುರಿತ ಮತ್ತು ತರಬೇತಿ ಪಡೆದ ಚಾಲಕರ ಅಗತ್ಯವಿರುತ್ತದೆ. ಆದರೆ ಸೂಕ್ತ ಅನುಭವ, ಆರೋಗ್ಯ ಪತ್ರ ಮತ್ತು ತರಬೇತಿ ಇಲ್ಲದವರ ಕೈಗೆ ಇಂತಹ ಹೈಟೆಕ್ ಬಸ್‌ಗಳನ್ನು ನೀಡುತ್ತಿರುವುದೇ ಇಂದಿನ ದುರಂತಗಳಿಗೆ ಪ್ರಮುಖ ಕಾರಣವಾಗಿದೆ. ಬಿಎಂಟಿಸಿ ಸಂಸ್ಥೆಯು ತಕ್ಷಣವೇ ಎಚ್ಚೆತ್ತುಕೊಂಡು ಚಾಲಕರಿಗೆ ಕಟ್ಟುನಿಟ್ಟಿನ ನಿಯಮ ಹಾಗೂ ಕಠಿಣ ತರಬೇತಿ ಜಾರಿಗೊಳಿಸದಿದ್ದರೆ ಸಾರ್ವಜನಿಕರ ಜೀವಕ್ಕೆ ಅಪಾಯ ತಪ್ಪಿದ್ದಲ್ಲ.
ಇದನ್ನೂ ಓದಿ: ಚುನಾವಣಾ ಆಯೋಗ ಕತ್ತೆ ಕಾಯ್ತಾ ಇದೆಯಾ? ಎಸ್‌ಐಆರ್ ಲೋಪ ಕುರಿತು ಪ್ರಿಯಾಂಕ್ ಖರ್ಗೆ ಕಿಡಿ