ಬೆಂಗಳೂರು : ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಸರ್ಕಾರದ (State Government) ಬುಡಮೇಲು ಮಾಡಲು ರಾಜ್ಯ ಬಿಜೆಪಿ (BJP) ನಾಯಕರು ಕೇಂದ್ರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನ ಪಡೆದು ಬಂದಿದ್ದಾರೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಲೇವಡಿ ಮಾಡಿದ್ದಾರೆ.
ಕರ್ನಾಟಕದಲ್ಲಿರೋ ಸಿದ್ದರಾಮಯ್ಯನವರ ಸರ್ಕಾರದ ಹಿಂದೂ ವಿರೋಧಿ ನೀತಿ, ಧರ್ಮಸ್ಥಳ ಪ್ರಕರಣ ಸೇರಿದಂತೆ, ಹಲವು ವಿಚಾರಗಳನ್ನು ಕರ್ನಾಟಕ ಬಿಜೆಪಿ ನಿಯೋಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸಿದೆ. ಈ ವೇಳೆ, ರಾಜ್ಯ ಬಿಜೆಪಿಯ ಕಾರ್ಯವೈಖರಿಯ ಬಗ್ಗೆ ಅಮಿತ್ ಶಾ, ಅಸಮಾಧಾನ ವ್ಯಕ್ತ ಪಡಿಸಿದ್ದಾರಂತೆ.
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪರಿಷತ್ತಿನಲ್ಲಿ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಟ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕಂಪಲ ನಿಯೋಗ, ಅಮಿತ್ ಶಾರನ್ನು ಭೇಟಿಯಾಗಿತ್ತು.
ಹೋರಾಟದ ಬಗ್ಗೆ ಅಮಿತ್ ಶಾ ಅತೃಪ್ತಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಒಂದಲ್ಲಾ ಒಂದು ಅಹಿತಕರ ಘಟನೆ, ಭ್ರಷ್ಟಾಚಾರದ ಸುದ್ದಿಗಳು, ಕೋಮು ಗಲಭೆ, ಹಿಂದೂ ವಿರೋಧಿ ತೀರ್ಮಾನಗಳು ನಡೆದರೂ, ವ್ಯವಸ್ಥಿತವಾಗಿ ಜನರ ಬಳಿ ತಲುಪಿಸುವಲ್ಲಿ ಒಟ್ಟಾರೆಯಾಗಿ ನೀವೆಲ್ಲಾ ವಿಫಲರಾಗಿದ್ದೀರಿ ಎನ್ನುವ ಅಸಮಾಧಾನವನ್ನು ಅಮಿತ್ ಶಾ ಹೊರಹಾಕಿದ್ದಾರಂತೆ.
‘ಸರ್ಕಾರ ಬುಡಮೇಲು ಮಾಡಲು ಅಮಿತ್ ಶಾ ಸಲಹೆ’
ಬಿಜೆಪಿ ನಾಯಕರು ಸರ್ಕಾರವನ್ನು ಬುಡಮೇಲು ಮಾಡುವುದರಲ್ಲಿ ಡಾಕ್ಟರೇಟ್ ಮಾಡಿರುವ ಅಮಿತ್ ಶಾ ಸಲಹೆ ಪಡೆದು ಬಂದಿದ್ದಾರೆ ಎಂದು ಬಿಕೆ ಹರಿಪ್ರಸಾದ್ ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾತಾಡಿದ ಹರಿಪ್ರಸಾದ್, ‘ಸರ್ಕಾರದಲ್ಲಿ ಲಾ ಅಂಡ್ ಆರ್ಡರ್ ಸರಿಯಿಲ್ಲ ಎಂದು ಹೇಳಿ ಬಿಜೆಪಿ ಚರಂಡಿಯಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡಿದೆ. ಹಿಂದೂಗಳ ಲ್ಯಾಬೊರೇಟರಿ ಆಗಿದ್ದಂತಹ ದಕ್ಷಿಣ ಕನ್ನಡದಲ್ಲಿ ಶಾಂತಿ ನೆಲಸಲು ಸಿದ್ದರಾಮಯ್ಯ ಅವರ ದಿಟ್ಟ ನಿರ್ಧಾರ ಕಾರಣ. ಈಗ ಅಲ್ಲಿ ಶಾಂತಿ ನೆಲೆಸಿರುವುದರಿಂದ ಬಿಜೆಪಿಗೆ ರೋಟಿ, ಕಪಡಾ, ಮಕಾನ್ ಬಂದ್ ಆಗಿದೆ. ಅದನ್ನು ಪುನರ್ ಸ್ಥಾಪನೆ ಮಾಡಲು ಬೇರೆ ಜಿಲ್ಲೆಯಲ್ಲಿ ಹೋಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಕಾಲೆಳೆದರು.
‘ನಮ್ಮ ಸರ್ಕಾರ ಬಂದಾಗಿಂದಲೂ ಇಲ್ಲಿಯವರೆಗೆ ಬಿಜೆಪಿ ಬಡವರು, ರೈತರು, ಕಾರ್ಮಿಕರ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಏನಾದರೂ ಚರ್ಚೆ ಮಾಡಿದ್ದಾರಾ? ಯಾವಾಗಲೂ ಪಾಳುಬಿದ್ದ ಸ್ಮಶಾನ, ಪಾಳುಬಿದ್ದ ದೇವಸ್ಥಾನ ಹುಡುಕಿ ರಾಜಕೀಯ ಮಾಡುತ್ತಾರೆ. ಧರ್ಮಸ್ಥಳದಲ್ಲಿ ಆಗುತ್ತಿರುವ ಜಗಳ ಧರ್ಮಸ್ಥಳದ ವಿಚಾರವಾಗಿ ಅಲ್ಲ. ಬಿಜೆಪಿಯಲ್ಲಿರುವ ಸ್ವಯಂ ಸೇವಕ ಸಂಘದ ಅಗ್ರಗಣ್ಯ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಬಿ.ಎಲ್ ಸಂತೋಷ್ ನಡುವಿನ ಜಗಳ ಧರ್ಮಸ್ಥಳವನ್ನ ಹಾಳು ಮಾಡುತ್ತಿದೆ. ಅಲ್ಲಿ ಶಾಂತಿ ನೆಲೆಸಿರುವುದು ಇವರಿಗೆ ಹಿಡಿಸುತ್ತಿಲ್ಲ. ಏನಾದರೂ ಮಾಡಿ ಕೆದಕಲು ನೋಡುತ್ತಿದ್ದಾರೆ, ಅದು ನಡೆಯಲ್ಲ. ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ. ಸಂಘ ಪರಿವಾರದ ನಡುವಿನ ಜಗಳದಿಂದಲೇ ಧರ್ಮಸ್ಥಳದಲ್ಲಿ ಗಲಾಟೆ ನಡೆಯುತ್ತಿದೆ’ ಎಂದು ಆರೋಪಿಸಿದರು.
ಇದನ್ನೂ ಓದಿ: ಮದ್ದೂರು ಗಲಭೆಗೆ ಪೊಲೀಸ್ ಇಲಾಖೆಯ ವೈಫಲ್ಯ ಎಂದ ವಿಜಯೇಂದ್ರ, ನಾಳೆ ಘಟನಾ ಸ್ಥಳಕ್ಕೆ ಭೇಟಿ