ಬೆಂಗಳೂರು: ಒಂದು ಕಡೆ ಆಡಳಿತ ವಿರೋಧಿ ಅಲೆ, ಮತ್ತೊಂದು ಕಡೆ ಹೆಚ್ಚುತ್ತಿರುವ ಕಾಂಗ್ರೆಸ್ ಪ್ರಾಬಲ್ಯ. ಇವುಗಳ ನಡುವೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಬಿಜೆಪಿಯ ಪ್ಲ್ಯಾನ್ ಏನು?.. ಇದು ಸದ್ಯ ರಾಜಕೀಯ ವಲಯದ ಪ್ರಶ್ನೆ.
ಇಂತಹ ಗೊಂದಲ, ಪ್ರಶ್ನೆಗಳು ಏನೇ ಇದ್ದರೂ ಬಿಜೆಪಿಯಂತೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಫೈಟ್ ಕೊಡಲು ಮತ್ತು ಮತ್ತೊಮ್ಮೆ ಅಧಿಕಾರ ಹಿಡಿಯಲು ಸಾಕಷ್ಟು ಸಿದ್ಧತೆಗಳನ್ನು ಮಾಡಿದೆ. ಆಗೊಮ್ಮೆ ಈಗೊಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದ ಪ್ರಧಾನಿ ಮೋದಿ, ಚುನಾವಣೆ ಹೊಸ್ತಿಲಲ್ಲಿರುವಾಗಲೇ 7 ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ವಿವಿಧ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಇನ್ನು ಆಡಳಿತ ವಿರೋಧಿ ಅಲೆ ಏನಿದ್ರೂ ಮತದಾನಕ್ಕೆ ಮೊದಲು ಮೋದಿ ಬಂದು ಹೋದ್ರೆ ಮತದಾರರ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ಬಿಜೆಪಿಗೂ ಗೊತ್ತಿದೆ. ಹೀಗಾಗಿ ಮೋದಿಯೇ ಈ ಬಾರಿಯ ಕರ್ನಾಟಕ ಚುನಾವಣೆಯ ಟ್ರಂಪ್ ಕಾರ್ಡ್.
ಈ ಬಾರಿ ರಾಜ್ಯದಲ್ಲಿ ಪ್ರಧಾನಿ ಸುಮಾರು 20 ಸಮಾವೇಶಗಳನ್ನು ನಡೆಸಲಿದ್ದಾರೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 8ರವರೆಗೂ ಮೋದಿ ರಾಜ್ಯದಲ್ಲೇ ಇರಲಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಹೈದರಾಬಾದ್ ಕರ್ನಾಟಕವನ್ನು ಟಾರ್ಗೆಟ್ ಮಾಡಿ, ಅಲ್ಲೇ ಅತಿ ಹೆಚ್ಚು ಸಮಾವೇಶಗಳನ್ನು ನಡೆಸಲಿದ್ದಾರೆ.
ಈ ರೀತಿ ಚುನಾವಣೆಗೆ ಬೇಕಾದ ಮಾಸ್ಟರ್ ಪ್ಲ್ಯಾನ್ ಗಳು ಈಗಾಗಲೇ ಬಿಜೆಪಿ ಸಿದ್ಧಪಡಿಸಿದ್ದು, ರಾಷ್ಟ್ರಮಟ್ಟದ ಪ್ರಮುಖ ನಾಯಕರು ಸ್ಟಾರ್ ಪ್ರಚಾರಕರಾಗಲಿದ್ದಾರೆ. ಈ ಪಟ್ಟಿಯಲ್ಲಿ ಅಮಿತ್ ಶಾ, ಆದಿತ್ಯನಾಥ್, ಜೆಪಿ ನಡ್ಡಾ ಪ್ರಮುಖರಾಗಿರಲಿದ್ದು, 15ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸುವ ಜವಾಬ್ದಾರಿ ಇವರ ಮೇಲಿದೆ.
ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕದಲ್ಲಿ ಆದಿತ್ಯನಾಥ್ ಸಮವೇಶಗಳನ್ನು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಪ್ರಚಾರ ಕಾರ್ಯಕ್ಕೆ ಎಪ್ರಿಲ್ 9ರಂದು ಮೋದಿ ಮೈಸೂರಿಗೂ ಆಗಮಿಸಲಿದ್ದು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಪ್ರಚಾರ, ರ್ಯಾಲಿಗಳು ಕಾವು ಪಡೆಯಲಿದೆ.