ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರೂರು ಕಲಬುರ್ಗಿಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ಪಾಲಾಗಿದೆ. ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಮೇಯರ್ ಆಗಿ ಬಿಜೆಪಿಯ ವಾರ್ಡ್ ನಂಬರ್ 46ರ ಪಾಲಿಕೆ ಸದಸ್ಯ ವಿಶಾಲ್ ದರ್ಗಿ ಅವರು ಆಯ್ಕೆಯಾದರೆ 25 ನೇ ವಾರ್ಡ್‌ನ ಸದಸ್ಯ ಶಿವಾನಂದ್ ಪಿಸ್ತಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ವಿಶಾಲ್ ದರ್ಗಿ ಅವರು 33 ಮತಗಳನ್ನು ಪಡೆದಿದ್ರೆ, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕಪನೂರ್ 32 ಮತಗಳನ್ನು ಪಡೆದಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಶಿವಾನಂದ್ ಪಿಸ್ತಿ ಅವರು 33 ಮತಗಳನ್ನು ಪಡೆದಿದ್ದು, ಎದುರಾಳಿ ಸ್ಪರ್ಧಿ ವಿಜಯಲಕ್ಷ್ಮಿ ಅವರಿಗೆ 32 ಮತಗಳು ಚಲಾವಣೆಯಾಗಿವೆ.
ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳು ಬಿಜೆಪಿ ಪಾಲಾಗುವ ಮುಖಾಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕಲಬುರಗಿಯಲ್ಲಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಮೊದಲ ಬಾರಿಗೆ ಸ್ವಂತಂತ್ರವಾಗಿ ಬಿಜೆಪಿ ಕಲಬುರಗಿ ಪಾಲಿಕೆಯ ಆಡಳಿತ ನಡೆಸಲಿದೆ
ಇನ್ನು ಮೇಯರ್, ಉಪಮೇಯರ್ ಆಗಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯ ಸಂಭ್ರಮಾಚರಣೆ ಜೋರಾಗೇ ನಡೀತು. ಕಲಬುರ್ಗಿಯ ಟೌನ್ ಹಾಲ್ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು