Wednesday, August 19, 2026
Homeಟಾಪ್ ನ್ಯೂಸ್BY VIJAYENDRA: ಮದ್ದೂರು ಗಲಭೆಗೆ ಪೊಲೀಸ್ ಇಲಾಖೆಯ ವೈಫಲ್ಯ ಎಂದ ವಿಜಯೇಂದ್ರ, ನಾಳೆ ಘಟನಾ ಸ್ಥಳಕ್ಕೆ...

BY VIJAYENDRA: ಮದ್ದೂರು ಗಲಭೆಗೆ ಪೊಲೀಸ್ ಇಲಾಖೆಯ ವೈಫಲ್ಯ ಎಂದ ವಿಜಯೇಂದ್ರ, ನಾಳೆ ಘಟನಾ ಸ್ಥಳಕ್ಕೆ ಭೇಟಿ

ಬೆಂಗಳೂರು: ಮದ್ದೂರಿನಲ್ಲಿ (Maddur) ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (B Y Vijayendra) ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮದ್ದೂರು ಗಲಭೆ ಘಟನೆಗೆ ಸಂಬಂಧಿಸಿ ಸತ್ಯ ಸಂಶೋಧನಾ ತಂಡವನ್ನು ನಾವು ಈಗಾಗಲೇ ಪ್ರಕಟಿಸಿದ್ದೇವೆ. ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದೇವೆ. ಸತ್ಯಾಸತ್ಯತೆ ಪರಿಶೀಲಿಸಿ ವರದಿ ಕೊಡಲು ತಿಳಿಸಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಒಂದು ರೀತಿ ತುಘಲಕ್ ದರ್ಬಾರ್ ಇದೆ. ಇವರು ನಿಜಾಮರ ಆಡಳಿತವನ್ನು ನೆನಪು ಮಾಡಿ ಕೊಡುತ್ತಿದ್ದಾರೆ. ಮುಖ್ಯಮಂತ್ರಿಗಳು, ಗೃಹ ಸಚಿವರು ತಮ್ಮ ಧೋರಣೆ ಸರಿಪಡಿಸಿಕೊಳ್ಳದಿದ್ದರೆ ಖಂಡಿತವಾಗಿ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಡಲಿದೆ. ಇದಕ್ಕೆ ರಾಜ್ಯ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗಣಪತಿ ಮೆರವಣಿಗೆಯಲ್ಲಿ ಕೇಸರಿ ಶಾಲು ಹಾಕಿ ಡ್ಯಾನ್ಸ್ ಮಾಡಿದ ಪಿಎಸ್‍ಐ ಒಬ್ಬರನ್ನು ಅಮಾನತು ಮಾಡುವ ಮಾಹಿತಿ ನನಗೆ ಬಂದಿದೆ. ನಾವೇನು ಪಾಕಿಸ್ತಾನದಲ್ಲಿದ್ದೇವಾ?. ನಮ್ಮ ರಾಜ್ಯದಲ್ಲಿ ಇವತ್ತು ಏನಾಗುತ್ತಿದೆ? ದಿನನಿತ್ಯ ಯಾವ ರೀತಿ ಪರಿಸ್ಥಿತಿ ಹದಗೆಡುತ್ತಿದೆ? ಕಾನೂನು ಸುವ್ಯವಸ್ಥೆ ಮುರಿದುಬಿದ್ದಿದೆ. ಕಾಂಗ್ರೆಸ್ ಸರಕಾರಕ್ಕೆ ಯಾಕೆ ಇಂಥ ದುರ್ಬುದ್ಧಿ ಬಂದಿದೆ. ಕಾಂಗ್ರೆಸ್ ಸರಕಾರಕ್ಕೆ ಹಿಂದೂಗಳು ಏನು ಅನ್ಯಾಯ ಮಾಡಿದ್ದಾರೆ ಎಂದು ರಾಜ್ಯದ ಅಸಂಖ್ಯಾತ ಹಿಂದೂ ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮದ್ದೂರು ಕಲ್ಲು ತೂರಾಟ ಪ್ರಕರಣ, ಆರೋಪಿಗಳ ಪರ ವಕಾಲತ್ತು ವಹಿಸದಿರಲು ವಕೀಲರ ಸಂಘ ನಿರ್ಧಾರ

ಹಿಂದೂಗಳ ಪರವಾಗಿ ಇಲ್ಲವೆಂದು ಘೋಷಿಸಲಿ: ಬಿಜೆಪಿ ಹಿಂದುತ್ವದ ಪರವಾಗಿ ಇದೆ. ಇವರ್ಯಾರು ಅದನ್ನು ಪ್ರಶ್ನೆ ಮಾಡಲು ಎಂದು ಆಕ್ಷೇಪಿಸಿದರು. ಸರಕಾರ ನಡೆಸುತ್ತಿದ್ದಾರೆ; ಕಾನೂನು- ಸುವ್ಯವಸ್ಥೆ ಕಾಪಾಡಿ ಹಿಂದೂಗಳ ರಕ್ಷಣೆ ಮಾಡುವುದು ಇವರ ಕರ್ತವ್ಯವಲ್ಲವೇ? ಎಂದು ಕೇಳಿದರು. ಕರ್ನಾಟಕ ರಾಜ್ಯದಲ್ಲಿ ನಮ್ಮ ಸರಕಾರ ಹಿಂದೂಗಳ ಪರವಾಗಿ ಇಲ್ಲವೆಂದು ಘೋಷಿಸಲಿ; ಹಿಂದೂಗಳು ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕೆಂದು ಪ್ರಕಟಿಸಲಿ ಎಂದು ಒತ್ತಾಯಿಸಿದರು.

ನಾಳೆ ಮದ್ದೂರಿಗೆ ಭೇಟಿ: ನಾಳೆ (ಸೆ.10) ಬೆಳಗ್ಗೆ 10.30ಕ್ಕೆ ನಾನು, ನಮ್ಮ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಪಕ್ಷದ ಇತರ ಮುಖಂಡರು ಮದ್ದೂರಿಗೆ ಭೇಟಿ ಕೊಡಲಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ಪೊಲೀಸ್ ಠಾಣೆಗೆ ಕಲ್ಲು ಬಿಸಾಡಿದ, ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದ ದೇಶದ್ರೋಹಿಗಳ ಕೇಸು ರದ್ದು ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಮೊನ್ನೆ ದಿನ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ; ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿಗಳು ಯಾಕೆ ಅಲ್ಲಿ ಇರಲಿಲ್ಲ? ಯಾಕೆ ಕೆಲವರು ಮಸೀದಿ ಒಳಗೆ ತೆರಳಲು ಪೊಲೀಸರು ಅವಕಾಶ ಕೊಟ್ಟರು? ಯಾಕೆ ಸರಕಾರ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ಮಾಡಿರುವುದೇ ಮಣ್ಣು ತಿನ್ನುವ ಕೆಲಸ: ಬಿಜೆಪಿ ಮೇಲೆ ದೂರುತ್ತೀರಾ ಹಾಗಾದರೆ? ಇವರ ವೈಫಲ್ಯವನ್ನು ನಮ್ಮ ಮೇಲೆ ಹಾಕುತ್ತೀರಾ ನೀವು? ಎಂದು ಕೇಳಿದರು. ಚಾಮುಂಡಿ ಬೆಟ್ಟಕ್ಕೆ ತೆರಳುವ ಹಿಂದೂ ಕಾರ್ಯಕರ್ತರನ್ನು ಇವತ್ತು ತಡೆದಿದ್ದಾರೆ. ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಹಿಂದೂಗಳನ್ನು ಕಂಡರೆ ಆಗುವುದಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳ ಸುತ್ತ ಪಟ್ಟಭದ್ರ ದುಷ್ಟ ಶಕ್ತಿಗಳು ಸುತ್ತುವರಿದಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಅವರ ಸುತ್ತಲಿನ ಸಚಿವರ ಹೇಳಿಕೆ ಗಮನಿಸಿದರೆ ಹಿಂದೂ ಕಾರ್ಯಕರ್ತರು ಅನಿವಾರ್ಯವಾಗಿ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.

ಹೆಚ್ಚಿನ ಸುದ್ದಿ

Change Language »
error: Content is protected !!