ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಬಿಜೆಪಿಗೆ ತಲೆಬಿಸಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹಾಲಿ ಶಾಸಕರೇ ಬಿಜೆಪಿಗೆ ಗುಡ್ ಬೈ ಹೇಳುತ್ತಿರೋದು.
ಬಿಜೆಪಿಯ ಹಾಲಿ ಎಂಎಲ್‌ಸಿ ಪುಟ್ಟಣ್ಣ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ್ರು. ಬಿಜೆಪಿ ಸದಸ್ಯತ್ವ ಮತ್ತು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪುಟ್ಟಣ್ಣ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೊಂಡ್ರು. ಇಂದು ಮದ್ಯಾಹ್ನ ಬಿಜೆಪಿಗೆ ರಾಜಿನಾಮೆ ನೀಡಿದ ಪುಟ್ಟಣ್ಣ ಸಂಜೆ ವೇಳೆಗೆ ಕಾಂಗ್ರೆಸ್ ಕಚೇರಿಯಲ್ಲಿ ಕಾಣಿಸಿಕೊಂಡ್ರು.
ಬಿಜೆಪಿಯಲ್ಲಿ ನಾವು ಸತ್ತಂತಿರಬೇಕು- ಪುಟ್ಟಣ್ಣ ಬೇಸರ
ನಾನು ೪ ಬಾರಿ ಶಿಕ್ಷಕರ ಕ್ಷೇತ್ರದಿಂದ ಗೆದ್ದಿದ್ದೇನೆ. ಶಿಕ್ಷಣ ಕ್ಷೇತ್ರಕ್ಕೆ ನನ್ನ ಕೈಲಾದ ಸೇವೆ ಮಾಡಿದ್ದೇನೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ಏನೂ ಕೆಲಸ ಮಾಡುವಂಥ ಪರಿಸ್ಥಿತಿ ಇರಲಿಲ್ಲ. ಬಿಜೆಪಿ ಬಗ್ಗೆ ನಾನು ಏನಂದುಕೊಂಡು ಹೋದೆನೋ ಅದೆಲ್ಲಾ ಸುಳ್ಳಾಯ್ತು . ಬಿಜೆಪಿ ಪಕ್ಷದಲ್ಲಿ ಸತ್ತಂತೆ ಇರಬೇಕು. ಆ ಬಗ್ಗೆ ನಾನು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದು ಬಿಜೆಪಿ ವಿರುದ್ಧ ಪುಟ್ಟಣ್ಣ ಬೇಸರ ವ್ಯಕ್ತ ಪಡಿಸಿದ್ರು. ನಾನು ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಇಲ್ಲಿಗೆ ಬಂದಿದ್ದೇನೆ. ಮುಕ್ತವಾಗಿ ನನ್ನನ್ನು ಇಲ್ಲಿ ಬರಮಾಡಿಕೊಂಡಿದ್ದಕ್ಕೆ ನನಗೆ ಸಂತಸವಿದೆ ಎಂದ್ರು.