ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ಟಿಕೆಟ್ ಆಕಾಂಕ್ಷಿಗಳ ಕಸರತ್ತು ಜೋರಾಗಿದೆ. ಗದಗ ಜಿಲ್ಲೆಯ ರೋಣ ಮತಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಕಳಕಪ್ಪ ಬಂಡಿಯ ಎದುರಾಗಿ ಅವರ ಪತ್ನಿಯೇ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಕಳಕಪ್ಪ ಬಂಡಿ ಅವರಿಗೆ ಸೋದರರು ಮತ್ತು ಪತ್ನಿಯೇ ಎದುರಾಳಿಗಳಾಗಿದ್ದಾರೆ. ಕಳಕಪ್ಪ ಬಂಡಿ ಸೋದರ ಸಿದ್ದಪ್ಪ ಬಂಡಿ ಮತ್ತು ಪತ್ನಿ ಸಂಯುಕ್ತಾ ಈ ಬಾರಿ ತಮಗೆ ಟಿಕೆಟ್ ನೀಡಬೇಕೆಂದು ರಾಜ್ಯ ನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಕಳಕಪ್ಪ ಬಂಡಿ ಸೋಲ್ತಾರೆ. ಹೀಗಾಗಿ ಕಳಕಪ್ಪ ಬಂಡಿ ಅವರ ಬದಲಾಗಿ ಪತ್ನಿ ಸಂಯುಕ್ತಾರಿಗೆ ಟಿಕೆಟ್ ನೀಡಬೇಕೆಂಬ ಆಗ್ರಹ ಕೇಳಿ ಬಂದಿದೆ.
ಶಾಸಕರ ಸಹೋದರ ಸಿದ್ದಪ್ಪ ಬಂಡಿ ಕೂಡಾ ಕ್ಷೇತ್ರದಲ್ಲಿ ತಮ್ಮದೇ ಬೆಂಬಲಿಗರನ್ನು ಹೊಂದಿದ್ದಾರೆ. ಗ್ರಾಮ ಪಂಚಾಯ್ತಿ, ಲೋಕಸಭಾ ಚುನಾವಣೆಗಳಲ್ಲಿಯೂ ಸಿದ್ದಪ್ಪ ಬಂಡಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದು, ಟಕೆಟ್ ಗಾಗಿ ಲಾಬಿ ಮಾಡುತ್ತಿದ್ದಾರೆ.
ನನಗೆ ಮಹಿಳಾ ಮತದಾರರ ಬೆಂಬಲವಿದೆ. ಕಳೆದ ಎರಡ್ಮೂರು ವರ್ಷಗಳಿಂದ ತಳಮಟ್ಟದಿಂದ ಕೆಲಸ ಮಾಡಿದ್ದೇನೆ. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದು, .ಕಿತ್ತೂರು ಚನ್ನಮ್ಮನ ಕುಟುಂಬಕ್ಕೆ ಸೇರಿದ ನಾನು ನನ್ನನ್ನು ಸಾಬೀತುಪಡಿಸಲು ಬಯಸುತ್ತೇನೆ. ರಾಜಕೀಯದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ನನಗೆ ಟಿಕೆಟ್ ನೀಡುವಂತೆ ಕೇಳಿದ್ದೇನೆ ಎಂದು ಸಂಯುಕ್ತಾ ಬಂಡಿ ಹೇಳಿದ್ದಾರೆ