ಕೋಲಾರ: ಮುಂದಿನ ಮುಖ್ಯಮಂತ್ರಿ ಮಾಜಿ ಸಿಎಂ ಪುತ್ರ ವಿಜಯೇಂದ್ರರೇ ಆಗಬೇಕು ಎಂದು ಕೋಲಾರದಲ್ಲಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಕೋಲಾರಕ್ಕೆ ಬಿಜೆಪಿ ಉಪಾಧ್ಯಕ್ಷ ವಿ.ವೈ. ವಿಜಯೇಂದ್ರ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಿ ಅದ್ಧೂರಿಯಾಗಿ ಸ್ವಾಗತಿಸಿದರು. ಮಾಜಿ ಶಾಸಕ ವರ್ತೂರು ಪ್ರಕಾಶ್, ಸಂಸದ ಎಸ್ ಮುನಿಸ್ವಾಮಿ, ಓಂ ಶಕ್ತಿ ಚಲಪತಿ ಹಾಜರಿದ್ದರು. ಈ ವೇಳೆ ರಾಜ್ಯದ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.
ಕೋಲಾರದ ಬಂಗಾರಪೇಟೆ ವೃತ್ತದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳಿಗೆ ಬೆಲೆ ಇಲ್ಲವಾಗಿದೆ. ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಹಿರಿಯ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಮತ್ತೆ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಲಿಂಗಾಯಿತರಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿಯಾಗಲೀ, ಜನರ ಬಳಿ ಹೋಗಿ ಹೇಳಿಕೊಳ್ಳುವಂತಹ ಯಾವುದೇ ಕೆಲಸವನ್ನಾಗಲೀ ಮಾಡಿಲ್ಲ. ಈಗ ಗ್ಯಾರಂಟಿ ಕಾರ್ಡ್ ಕೊಡುವುದಾಗಿ ಭರವಸೆ ನೀಡುತ್ತಿದ್ದಾರೆ. 50-60 ವರ್ಷ ಅಧಿಕಾರದಲ್ಲಿದ್ದ ಅವರಿಗೆ ಅಷ್ಟು ಅವಧಿ ಸಾಕಾಗಲಿಲ್ಲವಾ? ಈಗ ಗ್ಯಾರಂಟಿ ಕಾರ್ಡ್ ಕೊಡಲು ಹೋಗುತ್ತಿದ್ದಾರೆ. ಆದ್ರೆ ಜನರು ಮೂರ್ಖರಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.