ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರೊಬ್ಬರು ತಮ್ಮ ಕಾರನ್ನು ಅಡ್ಡ ನಿಲ್ಲಿ ರಸ್ತೆ ತಡೆ ಉಂಟು ಮಾಡಿದ ಪರಿಣಾಮ, ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ರೋಗಿಯ ಸಾವಿಗೆ ಕಾರಣವಾದ ಬಿಜೆಪಿ ಮುಖಂಡನನ್ನು ಉಮೇಶ್ ಮಿಶ್ರಾ ಎಂದು ಗುರುತಿಸಲಾಗಿದೆ.
ಮಿಶ್ರಾನ ಉದ್ಧಟತನವನ್ನು ಪ್ರಶ್ನಿಸಿದಾಗ ಮಿಶ್ರಾ ಬೆದರಿಕೆ ಹಾಕಿದ್ದಾರೆ ಎಂದು ರೋಗಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಸುರೇಶ್ ಚಂದ್ರ ಎಂಬವಗೆ ಶನಿವಾರ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಲಕ್ನೋದ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿತ್ತು. ಅದರಂತೆ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಲಕ್ನೋದ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ, ಬಿಜೆಪಿ ಮುಖಂಡ ತನ್ನ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಹೋಗಿದ್ದರು. ಇದರಿಂದಾಗಿ ಆಂಬ್ಯುಲೆನ್ಸ್ ಮಾರ್ಗ ಮಧ್ಯೆ ಸಿಲುಕಿ, ರೋಗಿ ಮೃತಪಟ್ಟಿದ್ದಾರೆ.
ತನ್ನ ಕಾರಿನ ಬಳಿಗೆ ಹಿಂತಿರುಗಿದ ಬಿಜೆಪಿ ಮುಖಂಡ ಮಿಶ್ರಾ, ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುವ ಬದಲು ಮೃತರ ಸಂಬಂಧಿಕರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಆಕ್ರೋಶಕ್ಕೆ ಗುರಿಯಾಗಿದೆ