ಬಿಜೆಪಿ ಶಾಲು ಹಾಕಿಕೊಂಡು ಬಿಜೆಪಿ ನಾಯಕರ ಜೊತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲನನ್ನ ಬಿಜೆಪಿ ಸೈಡಿಗೆ ತಳ್ಳಿದೆ.
ಈ ಕುರಿತು ಅಧಿಕೃತ ಮಾದ್ಯಮ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಸೈಲೆಂಟ್ ಸುನಿಲ್ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಸೈಲೆಂಟ್ ಸುನಿಲ್, ಬಿಜೆಪಿ ಸದಸ್ಯತ್ವ ಪಡೆದಿದ್ದರೆ ಅದನ್ನು ರದ್ದು ಮಾಡಲಾಗುವುದು. ಅವರು ಪಾರ್ಟಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದರೆ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಮಾದ್ಯಮ ಪ್ರಕಟಣೆ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆಗಿಳಿಯಲು ತಯಾರಿ ನಡೆಸಿದ್ದ ಸೈಲೆಂಟ್ ಸುನೀಲ, ಚಾಮರಾಜಪೇಟೆ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದ. ಇದಕ್ಕಾಗಿಯೇ ಚಾರಾಜಪೇಟೆ ತುಂಬೆಲ್ಲಾ ಸುನೀಲ ಫ್ಲೆಕ್ಸ್‌ಗಳನ್ನೂ ಅಳವಡಿಸಿ ಚುನಾವಣೆಗೆ ರೆಡಿಯಾಗಿದ್ದ. ಕ್ಷೇತ್ರದಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದ ಸೈಲೆಂಟ್ ಸುನೀಲ ಈಗ ಅತಂತ್ರನಾಗಿದ್ದಾನೆ. ರಕ್ತದಾನ ಶಿಬಿರದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರಾದ ಸಂಸದ ಪಿಸಿ ಮೋಹನ್, ತೇಜಸ್ವಿ ಸೂರ್ಯ ಪಾಲ್ಗೊಂಡ ವಿಚಾರ ಭಾರೀ ಟೀಕೆಗೊಳಪಟ್ಟಿತ್ತು. ಈ ಎಲ್ಲಾ ಮುಜುಗರಕ್ಕೆ ಬ್ರೇಕ್ ಹಾಕಲು ಇದೀಗ ಸುನೀಲನಿಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಪಕ್ಷ ಹೇಳಿದೆ.