ಬೆಂಗಳೂರು: ಬಿಜೆಪಿಯವರಿಗೆ ಈಗ ಜ್ಞಾನೋದಯ ಆಗಿದೆ. ಅನಂತ್ ಕುಮಾರ್ ಹೆಗಡೆ ಒಬ್ಬ ಹುಚ್ಚ ಅಂತ ನಾನು ಯಾವತ್ತೋ ಹೇಳಿದ್ದೆ. ಈಗ ರವಿಕುಮಾರ್ ಅವರಿಗೆ ಅರ್ಥ ಆಗಿದ್ದು, ಅನಂತ್ ಕುಮಾರ್ ಹೆಗಡೆ ಒಬ್ಬ ಹುಚ್ಚ ಎಂದಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂಗಡಗಿ, ಸಂಪುಟ ವಿಸ್ತರಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಸಿಎಂ, ಡಿಸಿಎಂ, ಹಿರಿಯ ನಾಯಕರು ನಿರ್ಧಾರ ಮಾಡುತ್ತಾರೆ. ಅದರ ಬಗ್ಗೆ ಚರ್ಚೆ ಮಾಡೋ ಅಧಿಕಾರ ನನಗೆ ಇಲ್ಲ. ನಾನು ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ಹೇಳಿದರು.
ಬಿಜೆಪಿಯವರ ಬಳಿ ಅವ್ಯವಹಾರಗಳ ದೊಡ್ಡ ಸರಮಾಲೆಯೇ ಇದೆ. ಅವರಿಗೆ ಮತ್ತೊಬ್ಬರ ತಟ್ಟೆಯಲ್ಲಿರೋ ನೊಣ ಕಾಣಿಸುತ್ತದೆ. ಆದರೆ ಅವರ ತಟ್ಟೆಯಲ್ಲಿರೋ ಕತ್ತೆ ಕಾಣಿಸುತ್ತಿಲ್ಲ. ಅವರ ಹಿಂದಿ ಇತಿಹಾಸ ನೋಡಿದರೆ ಈ ರಾಜ್ಯಕ್ಕಾಗಲೀ, ದೇಶಕ್ಕಾಗಲಿ ಏನು ಕೊಡುಗೆ ಕೊಟ್ಟಿದ್ದಾರೆ? ಕೇಂದ್ರ ಸರ್ಕಾರದಲ್ಲಿ ಬಿಜೆಪಿಯವರು ಅಧಿಕಾರಕ್ಕೆ ಬಂದು 12 ವರ್ಷ ಆಗುತ್ತಾ ಬಂದಿದೆ. ಇಷ್ಟು ವರ್ಷಗಳಲ್ಲಿ ಅವರು ಕರ್ನಾಟಕ್ಕೆ ಕೊಟ್ಟ ಕೊಡುಗೆ ಏನು? ನಾವು ಕಟ್ಟೋ ಟ್ಯಾಕ್ಸ್ ಮಾತ್ರ ನಮಗೆ ಸಿಕ್ಕಿದೆ. ಅವರಿಗೆ ಕರ್ನಾಟಕದ ಮೇಲೆ ಎಷ್ಟು ದ್ವೇಷ ಇದೆ ಎಂದರೆ, ಇಲ್ಲಿ ಜನರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂಬ ಕಾರಣಕ್ಕೆ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗುಡುಗಿದರು.
ವಕ್ಫ್ ವಿಚಾರದ ನೋಟಿಸ್ ಕೊಟ್ಟಿದ್ದು ಯಾವ ಕಾಲದಲ್ಲಿ? ಇದೇ ಬಿಜೆಪಿ ಸರ್ಕಾರದಲ್ಲಿ. ನನ್ನ ಹತ್ರ ಈಗಲೂ ಲಿಸ್ಟ್ ಇದೆ. ನನ್ನ ಕ್ಷೇತ್ರದಲ್ಲೇ ನೊಟಿಸ್ ಕೊಟ್ಟು, ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಅವರು ಮಾಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ಯಾವುದೇ ಅನ್ಯಾಯ ಮಾಡಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಬಿಜೆಪಿಗರು ಈ ಹೋರಾಟ ಬಿಟ್ಟು ಕೇಂದ್ರದ ಮುಂದೆ ಕರ್ನಾಟಕಕ್ಕೆ ಆಗುತ್ತಿರೋ ಅನ್ಯಾಯದ ಬಗ್ಗೆ ಮಾತನಾಡಲಿ. ಭದ್ರಾ ಯೋಜನೆಗೆ ಘೋಷಣೆ ಮಾಡಿದ್ದ ಐದು ಸಾವಿರ ಕೋಟಿ ರೂ. ತರುವಂತಹ ಕೆಲಸ ಮಾಡಲಿ ಎಂದರು.