ನವದೆಹಲಿ: ಭ್ರಷ್ಟರಿಗೆ ರಕ್ಷಣೆ ನೀಡುತ್ತಿರುವ ಕೇಂದ್ರ ಸರಕಾರ ಮತ್ತು ಬಿಜೆಪಿ ಭ್ರಷ್ಟರನ್ನು ಬಯಲಿಗೆಳೆದ ನಮ್ಮನ್ನೇ ಭ್ರಷ್ಟರು ಎನ್ನುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರು ಭ್ರಷ್ಟಾಚಾರಿಗಳು, ಲೂಟಿಕೋರರು. ಈ ದೇಶದ ಹಣ ಕೊಳ್ಳೆ ಹೊಡೆದವರು, ಬ್ಯಾಂಕ್ ಲೂಟಿ ಹೊಡೆದವರು, ಹೂಡಿಕೆ ಹೆಸರಿನಲ್ಲಿ ಬ್ಯಾಂಕ್ ಗಳು, ಎಲ್ ಐಸಿಯಿಂದ ಹಣ ತೆಗೆದು ತಮ್ಮ ಸಂಪತ್ತು ವೃದ್ಧಿಸಿದವರು ದೇಶದಿಂದ ಓಡಿಹೋಗುತ್ತಿದ್ದಾರೆ. ಅವರನ್ನು ಬೆನ್ನಟ್ಟುವವರು ಯಾರೂ ಇಲ್ಲ, ಅವರ ಬಗ್ಗೆ ತನಿಖೆ ನಡೆಸಲೂ ಇವರು ತಯಾರಿಲ್ಲ. ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನೂ ರಚಿಸುತ್ತಿಲ್ಲ. ಭ್ರಷ್ಟರ ಜೊತೆಗಿರುವ ಅವರು ಭ್ರಷ್ಟರೇ ಅಥವಾ ನಾವೇ?” ಎಂದು ಪ್ರಶ್ನಿಸಿದರು.
“ನಾವು ಭ್ರಷ್ಟರನ್ನು ಬಯಲಿಗೆಳೆಯುತ್ತಿದ್ದೇವೆ. ಕೇಂದ್ರ ಸರಕಾರ ಅದಾನಿಗೆ ಇಷ್ಟೊಂದು ಬೆಂಬಲ ನೀಡುತ್ತಿರುವುದೇಕೆ?, ಅದಾನಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಈ ಪ್ರಶ್ನೆಗಳನ್ನು ನಾವು ಕೇಳುತ್ತಿದ್ದೇವೆ” ಎಂದರು.