ಚುನಾವಣಾ ಪ್ರಣಾಳಿಕೆಯ ಅಂಗವಾಗಿ ಕಾಂಗ್ರೆಸ್ ಗ್ರಾರೆಂಟಿ ಕಾರ್ಡ್ ಹೆಸರಿನಲ್ಲಿ ಭರಪೂರ ಯೋಜನೆಗಳನ್ನು ಘೋಷಿಸುತ್ತಿದೆ. ಪ್ರತಿ ಯೋಜನೆಗಳನ್ನು ಕಾಂಗ್ರೆಸ್‍ನ ವರಿಷ್ಠರೇ ಘೋಷಿಸುತ್ತಿದ್ದು, ಇದು ಕಾಂಗ್ರೆಸ್ ಚುನಾವಣಾ ಪ್ರಚಾರದ ಪ್ರಮುಖ ಅಂಗವಾಗಿ ಮಾರ್ಪಟ್ಟಿದೆ. ಈ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್‍ಗಳನ್ನು ಬಿಜೆಪಿ ನಾಯಕರು ಸಾಲಾಗಿ ಲೇವಡಿ ಮಾಡಲು ಪ್ರಾರಂಭಿಸಿದ್ದಾರೆ.
ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‍ನ ಯೋಜನೆಗಳನ್ನು ವಿವರಿಸಲು ಹಾಗೂ ಅವುಗಳ ಸಾಧ್ಯಾಸಾಧ್ಯತೆಯ್ನ ಜನರಿಗೆ ಅರ್ಥೈಸಲು ಬೋಗಸ್ ಕಾರ್ಡ್ ಎಂಬ ಸರಣಿ ಅಭಿಯಾನವನ್ನೇ ಶುರುಮಾಡಲಾಗಿದೆ. ಇದರಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಕಾಂಗ್ರೆಸ್‍ನ ಗ್ಯಾರೆಂಟಿ ಯೋಜನೆಗಳನ್ನು ಟೀಕಿಸಲಾರಂಭಿಸಿದ್ದಾರೆ.
ರಾಜಸ್ಥಾನ, ಛತ್ತೀಸ್‍ಘಡ ಹಾಗೂ ಜಾರ್ಖಂಡ್‍ನಲ್ಲಿ ಈ ಮೊದಲು ಘೋಷಿಸಿದ ನಿರುದ್ಯೋಗಿ ಭತ್ಯೆಯನ್ನು ಇದುವರೆಗೂ ಯಾಕೆ ಜಾರಿಗೊಳಿಸಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಆರೋಗ್ಯ ಸಚಿವ ಕೆ. ಸುಧಾಕರ್, ನಾಲ್ಕು ಯೋಜನೆಗಳಲ್ಲಿ ಒಂದನ್ನೂ ಸಹ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ರಾಜ್ಯವನ್ನು ದೌರ್ಭಾಗ್ಯದತ್ತ ಸೆಳೆಯಲಾಗುತ್ತಿದೆ. ಇಷ್ಟು ಕೆಳಮಟ್ಟಕ್ಕೆ ಹೋಗಿ ಸುಳ್ಳು ಹೇಳಿ ಮತಯಾಚಿಸುವ ದುರ್ಗತಿ ಕಾಂಗ್ರೆಸ್‍ಗೆ ಬಂದಿದೆ ಎಂದಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್, ಇಷ್ಟು ವರ್ಷಗಳಾದ ಮೇಲಾದರೂ ಕಾಂಗ್ರೆಸ್‍ಗೆ ಜನರ ನೆನಪಾಗಿದೆಯಲ್ಲಾ. ಇವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಕುಹಕವಾಡಿದ್ದಾರೆ.