ಕೇಂದ್ರ ಗೃಹಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಭಾನುವಾರ ತಡರಾತ್ರಿ ಪ್ರಾರಂಭಗೊಂಡಿದೆ. ಮುಂಬರುವ ಚುನಾವಣಾ ಸಿದ್ಧತೆಯ ದೃಷ್ಟಿಯಿಂದ ಈ ಸಭೆ ಮಹತ್ವ ಪಡೆದಿದ್ದು, ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿ ನಾಯಕರ ದಂಡು ಒಟ್ಟು ಗೂಡಿದೆ.
ಇದುವರೆಗೂ ಬಿಜೆಪಿ ಯಾವುದೇ ಪಟ್ಟಿಯನ್ನು ಹೊರಬಿಟ್ಟಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ತಿರುಗೇಟು ನೀಡುವಂತಹ ನಾಯಕರ ಪಟ್ಟಿ ಸಿದ್ದವಾಗಿದ್ದು, ಇಂದು ಅಮಿತ್ ಶಾ ಉಪಸ್ಥಿತಿಯಲ್ಲಿ ಪಟ್ಟಿ ಅಂತಿಮಗೊಳ್ಳಲಿದೆ ಎನ್ನಲಾಗಿದೆ. ಜೊತೆಗೆ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಹಾಗೂ ಇತರೆ ಶಾಸಕರು ಇರುವ ಕ್ಷೇತ್ರಗಳಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗಳಿಗೆ ನೀಡಬೇಕೋ ಬೇಡವೋ ಎಂಬುದೂ ಸಹ ಇಂದು ನಿರ್ಣಯವಾಗುವ ನಿರೀಕ್ಷೆಯಿದೆ. ಹಾಗೆಯೇ ಹೊಸಮುಖಗಳಿಗೆ ಪ್ರಾಧಾನ್ಯತೆ ನೀಡುವ ಬಗ್ಗೆಯೂ ಬಿಜೆಪಿ ನಾಯಕರ ನಿರ್ಣಯ ಹೊರಬೀಳಲಿದೆ ಎನ್ನಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಬಿಜೆಪಿ ಸಮಿತಿ ಮೂರು ಹೆಸರುಗಳನ್ನು ಸೂಚಿಸಿದೆ ಎನ್ನಲಾಗಿದ್ದು, ಅವುಗಳ ಪೈಕಿ ಅಂತಿಮ ಹೆಸರು ಆಯ್ಕೆ ಮಾಡುವುದಾಗಿ ಬಿಜೆಪಿ ಆಂತರಿಕ ಮೂಲಗಳು ಹೇಳಿವೆ. ಇದೇ ವೇಳೆ ಎಷ್ಟು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಮತ್ತು ಮೊದಲ ಪಟ್ಟಿಯಲ್ಲಿರುವ ಹೆಸರುಗಳ ಬಗ್ಗೆಯು ಇಂದು ಅಮಿತ್ ಶಾ ಸಾರಥ್ಯದ ಸಭೆ ಚರ್ಚಿಸುವ ಸಾಧ್ಯತೆಗಳಿವೆ.
ಸಭೆಯಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೋರ್ ಕಮಿಟಿ ಸದಸ್ಯರಾದ ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ವಿಶೇಷ ಆಹ್ವಾನಿತರಾಗಿ ಅರುಣ್ ಸಿಂಗ, ಡಿ.ಕೆ.ಅರುಣಾ, ಸಿ.ಟಿ.ರವಿ ಪಾಲ್ಗೊಂಡಿದ್ದಾರೆ.