ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ಮತ್ತು ಲೋಪಗಳು ನಡೆಯುತ್ತಿವೆ ಎಂದು ಆರೋಪಿಸಿ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ನೇತೃತ್ವದ ಹಿರಿಯ ನಾಯಕರ ನಿಯೋಗವು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಜಯನಗರ ಸೇರಿದಂತೆ ಹಲವೆಡೆ ನಡೆದಿರುವ ಅಕ್ರಮಗಳ ದೃಢೀಕೃತ ದಾಖಲೆಗಳನ್ನು ಆಯೋಗಕ್ಕೆ ಹಸ್ತಾಂತರಿಸಿರುವ ನಿಯೋಗ, ತಕ್ಷಣವೇ ಮಧ್ಯಪ್ರವೇಶಿಸಿ ಲೋಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿದೆ. ಬಿಜೆಪಿ ನಿಯೋಗದಲ್ಲಿ ಶಾಸಕರುಗಳಾದ ಎಸ್. ಸುರೇಶ್ ಕುಮಾರ್, ಸಿ.ಕೆ. ರಾಮಮೂರ್ತಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಮಸೀದಿ, ಕಲ್ಯಾಣ ಮಂಟಪಗಳಲ್ಲಿ ಎಸ್‌ಐಆರ್
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಿಜಯೇಂದ್ರ, ಕೇಂದ್ರ ಚುನಾವಣಾ ಆಯೋಗವು ಸದುದ್ದೇಶ ಇಟ್ಟುಕೊಂಡು ಎಸ್‌ಐಆರ್ ಪ್ರಕ್ರಿಯೆ ಜಾರಿಗೆ ತಂದಿದೆ. ನಿಯಮಾವಳಿಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಫಾರ್ಮ್‌ಗಳನ್ನು ವಿತರಿಸಿ, ಮಾಹಿತಿ ಸಂಗ್ರಹಿಸಬೇಕು. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಾಗಿ ಅಧಿಕಾರಿಗಳು ಕಲ್ಯಾಣ ಮಂಟಪಗಳು ಮತ್ತು ಮಸೀದಿಗಳ ಒಳಗೆ ಕುಳಿತುಕೊಂಡು ಸಾಮೂಹಿಕವಾಗಿ ಅರ್ಜಿಗಳನ್ನು ತುಂಬುತ್ತಿದ್ದಾರೆ. ಮಸೀದಿಯೊಳಗೆ ಬಿಎಲ್‌ಓಗಳು ಕುಳಿತುಕೊಂಡರೆ ನಮ್ಮ ಪಕ್ಷದ ಬಿಎಲ್‌ಎಗಳು ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳನ್ನು ತಮಗೆ ಮನಸೋಇಚ್ಛೆ ಬಳಸಿಕೊಳ್ಳುತ್ತಿದ್ದಾರೆ ಮತ್ತು ಸಾರ್ವಜನಿಕರಿಂದ ಬಲವಂತವಾಗಿ ಎನ್ಯುಮರೇಷನ್ ಫಾರ್ಮ್‌ಗಳನ್ನು ಬರೆಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಇಡೀ ಪ್ರಕ್ರಿಯೆಗೆ ತಣ್ಣೀರೆರಚುವ ಕೆಲಸ ಮಾಡುತ್ತಿದೆ. ಎಲ್ಲೆಲ್ಲಿ ಯಡವಟ್ಟುಗಳಾಗಿದೆಯೋ, ಅಲ್ಲೆಲ್ಲಾ ಎರಡನೇ ಬಾರಿ (ಮರು ಪರಿಶೀಲನೆ) ಎಸ್‌ಐಆರ್ ನಡೆಸಬೇಕು, ಎಂದು ಅವರು ಆಗ್ರಹಿಸಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಬಿವೈವಿ ಚಾಟಿ
ಚುನಾವಣಾ ಆಯೋಗದ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, ಕೇಂದ್ರ ಚುನಾವಣಾ ಆಯೋಗ ತನ್ನ ಕೆಲಸವನ್ನು ಅತ್ಯಂತ ಪಾರದರ್ಶಕವಾಗಿ ಮಾಡುತ್ತಿದೆ. ಆದರೆ, ಕಾಂಗ್ರೆಸ್‌ನಲ್ಲಿ ಕೆಲವು ಕತ್ತೆಗಳಿವೆ. ಆ ಕತ್ತೆಗಳೇ ಇಡೀ ಚುನಾವಣಾ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿವೆ ಎಂದು ಚಾಟಿ ಬೀಸಿದರು. ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷದ ಪ್ರಭಾವದಿಂದ ಮತದಾರರ ಪಟ್ಟಿಯಲ್ಲಿ ನಡೆದ ದ್ವೇಷದ ರಾಜಕಾರಣ ಮತ್ತು ಅಕ್ರಮಗಳನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ನಾಯಕರ ಫೋಟೋ ಇರುವ ಫಾರ್ಮ್ ವಿತರಣೆ
ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಅಕ್ರಮ ನಡೆಯುತ್ತಿದೆ ಎಂದು ಆರೋಪ ಮಾಡಿದರು. ನಮ್ಮ ಜಯನಗರ ಕ್ಷೇತ್ರದಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಅಲ್ಲಿ ಹಂಚಲಾಗುತ್ತಿರುವ ಎನ್ಯುಮರೇಷನ್ ಫಾರ್ಮ್‌ಗಳಲ್ಲಿ ಕಾಂಗ್ರೆಸ್ ನಾಯಕರ ಫೋಟೋಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ. ನಿನ್ನೆ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಎಚ್ಚರಿಕೆ ನೀಡಿದ್ದರೂ, ಇಂದು ಕೂಡ ಅದೇ ಅಕ್ರಮ ಮುಂದುವರಿದಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರು ಸರಿಪಡಿಸುವುದಾಗಿ ಹೇಳಿದ್ದಾರಾದರೂ, ಪ್ರಾಯೋಗಿಕವಾಗಿ ಯಾವುದೇ ಕ್ರಮವಾಗಿಲ್ಲ, ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಆರ್‌ಓಗಳ ಅಮಾನತಿಗೆ ಒತ್ತಾಯ
ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಆಯಾ ಭಾಗದ ಸಹಾಯಕ ಮತದಾರರ ನೋಂದಣಾಧಿಕಾರಿಗಳೇ (ARO) ನೇರ ಕಾರಣ. ದೂರು ನೀಡಿದರೂ ಸೌತ್ ಕಮಿಷನರ್ ರಮೇಶ್ ಅವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ತಕ್ಷಣವೇ ಕರ್ತವ್ಯ ಲೋಪ ಎಸಗಿರುವ ಎಆರ್‌ಓಗಳನ್ನು ಅಮಾನತು ಮಾಡಬೇಕು. ಎಲ್ಲೆಲ್ಲಿ ಇಂತಹ ಫೋಟೋ ಇರುವ ಫಾರ್ಮ್‌ಗಳನ್ನು ಹಂಚಲಾಗಿದೆಯೋ ಮತ್ತು ಅಕ್ರಮಗಳು ನಡೆದಿವೆಯೋ, ಆ ಎಲ್ಲಾ ಕಡೆಗಳಲ್ಲಿ ತಕ್ಷಣವೇ ಅಧಿಕಾರಿಗಳನ್ನು ಬದಲಾಯಿಸಿ ರೀ-ವೆರಿಫಿಕೇಷನ್ (ಮರು ಪರಿಶೀಲನೆ) ನಡೆಸಬೇಕು ಎಂದು ನಾವು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದೇವೆ, ಎಂದು ಶಾಸಕ ಸಿ.ಕೆ. ರಾಮಮೂರ್ತಿ ತಿಳಿಸಿದರು.
ಇದನ್ನೂ ಓದಿ: ಚುನಾವಣಾ ಆಯೋಗ ಕತ್ತೆ ಕಾಯ್ತಾ ಇದೆಯಾ? ಎಸ್‌ಐಆರ್ ಲೋಪ ಕುರಿತು ಪ್ರಿಯಾಂಕ್ ಖರ್ಗೆ ಕಿಡಿ