ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಕ್ಷದ ರಾಜ್ಯ ನಾಯಕರೊಂದಿಗೆ ಶನಿವಾರ ಇಡೀ ದಿನ ಸಮಾಲೋಚನೆ ನಡೆಸಿದರು. ಇಂದು ಸಂಜೆ 5 ಗಂಟೆಗೆ ಕೇಂದ್ರ ಸಂಸದೀಯ ಮಂಡಳಿಯ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿಗೆ ಅಂತಿಮಗೊಳಿಸುವ ಸಾಧ್ಯತೆ ಇದೆ.
ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಹಾಗೂ ಸಂಸದೀಯ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ. ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಭಾನುವಾರ ತಡ ರಾತ್ರಿ ಅಥವಾ ಸೋಮವಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರದಾನ್, ಸಹ ಉಸ್ತುವಾರಿ ಮನ್ಸುಖ್ ಮಾಂಡವೀಯಾ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತಿತರರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಂಜೆ ನಡೆಯುವ ಸಂಸದೀಯ ಮಂಡಳಿ ಸಭೆಯಲ್ಲಿ ಎಲ್ಲ 224 ಕ್ಷೇತ್ರಗಳ ಕುರಿತು ಚರ್ಚಿಸಲಾಗುತ್ತದೆ.