ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಇದ್ದು, ಕಾಂಗ್ರೆಸ್ 2 ಮತ್ತು ಜೆಡಿಎಸ್ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಪಟ್ಟಿ ಬಿಡುಗಡೆ ಮಾಡಲೇಬೇಕಾದ ಮತ್ತು ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕಾದ ಒತ್ತಡದಲ್ಲಿದೆ ಬಿಜೆಪಿ.
ಹೀಗಾಗಿ ಟಿಕೆಟ್ ಅಂತಿಮಗೊಳಿಸಲು ರವಿವಾರ ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ನಳಿನ್ ಕುಮಾರ್ ಕಟೀಲ್, ಸಿಟಿ ರವಿ ದೆಹಲಿ ತಲುಪಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೂ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದ್ದುಮ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನಾಯಕತ್ವದಲ್ಲಿ ಈ ಸಭೆ ನಡೆಯಲಿದೆ. ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಅನ್ನೋದು ಇದೇ ಸಭೆಯಲ್ಲಿ ನಿರ್ಧಾರವಾಗಲಿದೆ.
ಭಾರೀ ಆಡಳಿತವಿರೋಧಿ ಅಲೆಯಿಂದಾಗಿ ಕರ್ನಾಟಕ ಬಿಜೆಪಿ ನಿಜಕ್ಕೂ ಅಗ್ನಿಪರೀಕ್ಷೆ ಎದುರಿಸುತ್ತಿದೆ. ಜೊತೆಗೆ ಸರ್ಕಾರದ ವಿರುದ್ಧ, ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳೂ ಕೇಳಿಬಂದಿವೆ. ಹೀಗಾಗಿ ಯಾವುದೇ ಮುಲಾಜಿಗೆ ಒಳಗಾಗದೆ ಸೂಕ್ತ ಅಭ್ಯರ್ಥಿಯ ಆಯ್ಕೆಯಲ್ಲದೆ ಬಿಜೆಪಿಗೆ ಬೇರೆ ದಾರಿ ಇಲ್ಲ. ಇದೇ ಕಾರಣದಿಂದಾಗಿ ಕೆಲವು ಹಾಲಿ ಶಾಸಕರಿಗೂ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಇವತ್ತು ಸಭೆಯಲ್ಲಿ ಟಿಕೆಟ್ ಫೈನಲೈಸ್ ಆಗಲಿದ್ದು, ಬಹುತೇಕ ಎಪ್ರಿಲ್ 10ರಂದು ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.