ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಜಾಹಿರಾತುಗಳನ್ನು ತೆರವು ಗೊಳಿಸುತ್ತಿದೆ. ಆದರೆ, ಬಿಜೆಪಿಯ ಜಾಹಿರಾತನ್ನು ಮುಚ್ಚಲು ಬಿಜೆಪಿಯದ್ದೇ ಜಾಹಿರಾತನ್ನು ಬಳಸಿದ ವಿಲಕ್ಷಣ ಘಟನೆಯು ಆಯೋಗದ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುತವಂತಾಗಿದೆ.
ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕರ್ನಾಟಕ ಕಾಂಗ್ರೆಸ್ ಚುನಾವಣಾ ಆಯೋಗದ ನಡೆಯನ್ನು ತೀವ್ರವಾಗಿ ಟೀಕಿಸಿದೆ.
ವೈರಲ್ ಫೋಟೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿಯ ಜಾಹೀರಾತು ಮುಚ್ಚಿದ್ದು ಬಿಜೆಪಿಯ ಜಾಹೀರಾತಿನಿಂದಲೇ! ಇದು ಬೆಂಗಳೂರಿನ ಜ್ಯುಡಿಶೀಯಲ್ ಲೇಔಟ್ ನಲ್ಲಿ ಕಂಡುಬಂದಿದೆ.. ಚುನಾವಣಾಧಿಕಾರಿಗಳೇ, ನಿಮ್ಮ ನೀತಿ ಸಂಹಿತೆ ಜಾರಿಯಲ್ಲಿ ಬಿಜೆಪಿಗೆ ಅನುಕೂಲವಾಗುವಂತಹ ಹಲವು ಲೋಪಗಳು ನಡೆಯುತ್ತಿವೆ. ನಿಷ್ಪಕ್ಷಪಾತ, ಲೋಪರಹಿತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು.” ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಟೀಕಿಸಿದೆ.