Thursday, July 16, 2026
Homeಟಾಪ್ ನ್ಯೂಸ್BIKE AMBULANCE : ಜೀವ ರಕ್ಷಕನಿಗೆ ಮರುಜೀವ - ಮತ್ತೆ ರಸ್ತೆಗಿಳಿಯಲಿವೆ 100 ಹೈಟೆಕ್ ಬೈಕ್...

BIKE AMBULANCE : ಜೀವ ರಕ್ಷಕನಿಗೆ ಮರುಜೀವ – ಮತ್ತೆ ರಸ್ತೆಗಿಳಿಯಲಿವೆ 100 ಹೈಟೆಕ್ ಬೈಕ್ ಆಂಬುಲೆನ್ಸ್!

ಬೆಂಗಳೂರು: ಮಹಾನಗರದ(Bengaluru) ಅಬ್ಬರದ ಟ್ರಾಫಿಕ್ ಹಾಗೂ ಕಿರಿದಾದ ಗಲ್ಲಿ ರಸ್ತೆಗಳ ಮಧ್ಯೆ ಸಿಲುಕಿ, ಸಕಾಲಕ್ಕೆ ಆಸ್ಪತ್ರೆ ತಲುಪಲಾಗದೆ ಜೀವ ಕಳೆದುಕೊಳ್ಳುವ ರೋಗಿಗಳ ಪಾಲಿಗೆ ಕರ್ನಾಟಕ ಆರೋಗ್ಯ ಇಲಾಖೆ(Health Department) ಭರ್ಜರಿ ಸಿಹಿ ಸುದ್ದಿ ನೀಡಿದೆ. ತಾಂತ್ರಿಕ ಕಾರಣಗಳಿಂದಾಗಿ ಕಳೆದ ಕೆಲವು ದಿನಗಳಿಂದ ಮೂಲೆ ಸೇರಿದ್ದ ‘ಬೈಕ್ ಆಂಬುಲೆನ್ಸ್'(Bike Ambulance) ಸೇವೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಮರುಜೀವ ನೀಡುತ್ತಿದ್ದು, ಸಾರ್ವಜನಿಕರ ಜೀವ ರಕ್ಷಣೆಗೆ ಹೊಸ ಪ್ಲಾನ್ ಮಾಡಿದೆ.

ಮೊದಲ ಹಂತದಲ್ಲಿ 100 ಹೈಟೆಕ್ ಬೈಕ್‌ಗಳು ಸಜ್ಜು
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮೊದಲ ಹಂತದಲ್ಲೇ ಸರಿಸುಮಾರು 100 ಅತ್ಯಾಧುನಿಕ ಹಾಗೂ ಹೈಟೆಕ್ ಸೌಲಭ್ಯಗಳುಳ್ಳ ಬೈಕ್ ಆಂಬುಲೆನ್ಸ್‌ಗಳನ್ನು ರಸ್ತೆಗಿಳಿಸಲು ಆರೋಗ್ಯ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ದೊಡ್ಡ ಆಂಬುಲೆನ್ಸ್‌ಗಳು ಸುಲಭವಾಗಿ ಹೋಗಲಾಗದ ಕಿರಿದಾದ ರಸ್ತೆಗಳು ಹಾಗೂ ಟ್ರಾಫಿಕ್ ಜ್ಯಾಮ್ ಇರುವ ಪ್ರದೇಶಗಳಲ್ಲಿ ಈ ಬೈಕ್ ಆಂಬುಲೆನ್ಸ್‌ಗಳು ಇನ್ನು ಮುಂದೆ ಮಿಂಚಿನ ವೇಗದಲ್ಲಿ ಸಂಚರಿಸಲಿವೆ.

‘ಗೋಲ್ಡನ್ ಅವರ್’ ಚಿಕಿತ್ಸೆಗೆ ಸಿಗಲಿದೆ ಆನೆ ಬಲ
ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಮೊದಲ ಒಂದು ಗಂಟೆಯ ಸಮಯವನ್ನು ಅತ್ಯಂತ ಅಮೂಲ್ಯವಾದ ‘ಗೋಲ್ಡನ್ ಅವರ್’ ಎಂದು ಪರಿಗಣಿಸಲಾಗುತ್ತದೆ. ಈ ನಿರ್ಣಾಯಕ ಅವಧಿಯಲ್ಲಿ ರೋಗಿಗೆ ಸಿಗುವ ಪ್ರಾಥಮಿಕ ಚಿಕಿತ್ಸೆ ಆತನ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯಾಘಾತ, ರಸ್ತೆ ಅಪಘಾತದಂತಹ ತೀವ್ರ ತುರ್ತು ಸಂದರ್ಭಗಳಲ್ಲಿ ಈ ಬೈಕ್ ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿ, ರೋಗಿಗೆ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಲು ನೆರವಾಗಲಿವೆ. ಸರ್ಕಾರದ ಈ ನಿರ್ಧಾರದಿಂದಾಗಿ ಬೆಂಗಳೂರಿನ ಲಕ್ಷಾಂತರ ಜನರಿಗೆ ತುರ್ತು ಸಮಯದಲ್ಲಿ ದೊಡ್ಡ ರಿಲೀಫ್ ಸಿಗಲಿದೆ.

ಮಿಂಚಿನ ವೇಗದ ಸಂಚಾರ: ಹೇಗೆ ಕೆಲಸ ಮಾಡುತ್ತದೆ ಬೈಕ್ ಆಂಬುಲೆನ್ಸ್?
ಈ ಬೈಕ್ ಆಂಬುಲೆನ್ಸ್‌ಗಳು ಕಿರಿದಾದ ಗಲ್ಲಿಗಳು, ಫ್ಲೈಓವರ್‌ಗಳು ಹಾಗೂ ಭಾರಿ ಟ್ರಾಫಿಕ್ ಇರುವ ರಸ್ತೆಗಳಲ್ಲೂ ಸುಲಭವಾಗಿ ನುಸುಳಿಕೊಂಡು ಸಾಗಬಲ್ಲವು. ಸಾಮಾನ್ಯ ಆಂಬುಲೆನ್ಸ್‌ಗಳಿಗೆ ಹೋಲಿಸಿದರೆ ಇವು ಸುಮಾರು ಶೇ. 40 ರಷ್ಟು ವೇಗವಾಗಿ ನಿಗದಿತ ಸ್ಥಳವನ್ನು ತಲುಪುತ್ತವೆ. ತರಬೇತಿ ಪಡೆದ ಪ್ಯಾರಾಮೆಡಿಕಲ್ ಸಿಬ್ಬಂದಿ ಅಥವಾ ನರ್ಸ್‌ಗಳೇ ಈ ಬೈಕ್‌ಗಳನ್ನು ಚಲಾಯಿಸಲಿದ್ದಾರೆ. ಅಪಘಾತ ಅಥವಾ ಹೃದಯಾಘಾತ ಸಂಭವಿಸಿದ ಜಾಗಕ್ಕೆ ತಕ್ಷಣವೇ ತಲುಪುವ ಈ ಸಿಬ್ಬಂದಿ, ದೊಡ್ಡ ಆಂಬುಲೆನ್ಸ್ ಬರುವವರೆಗೂ ರೋಗಿಯ ಸ್ಥಿತಿ ಗಂಭೀರವಾಗದಂತೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಜೀವ ರಕ್ಷಿಸಲಿದ್ದಾರೆ.

ಇದು ಬೈಕ್ ಅಲ್ಲ, ಚಲಿಸುವ ಮಿನಿ ತುರ್ತು ಚಿಕಿತ್ಸಾ ಘಟಕ!
ಇವು ಕೇವಲ ಸಾಮಾನ್ಯ ಬೈಕ್‌ಗಳಾಗಿರದೆ, ಮಿನಿ ತುರ್ತು ಚಿಕಿತ್ಸಾ ಘಟಕದಂತೆ ಕಾರ್ಯನಿರ್ವಹಿಸಲಿವೆ. ಪ್ರತಿ ಬೈಕ್ ಆಂಬುಲೆನ್ಸ್‌ನಲ್ಲಿ ಪೋರ್ಟಬಲ್ ಆಮ್ಲಜನಕ ಸಿಲಿಂಡರ್, ಪ್ರಥಮ ಚಿಕಿತ್ಸಾ ಕಿಟ್, ಜೀವರಕ್ಷಕ ತುರ್ತು ಔಷಧಗಳು, ಬಿಪಿ ಮಾನಿಟರ್, ಗ್ಲುಕೋಮೀಟರ್ ಹಾಗೂ ಹೃದಯದ ಲಯ ಪರಿಶೀಲಿಸುವ ಯಂತ್ರಗಳನ್ನು ಅಳವಡಿಸಲಾಗಿರುತ್ತದೆ. ಇದರೊಂದಿಗೆ ಡಿಜಿಟಲ್ ಕಮ್ಯುನಿಕೇಶನ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯೂ ಇರಲಿದೆ.

ಇದನ್ನೂ ಓದಿ : ಆರ್ಯವರ್ಧನ್ ಗುರೂಜಿ ವಿರುದ್ಧ ದೂರು! ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಂದ ಬುಲಾವ್!

ಹೆಚ್ಚಿನ ಸುದ್ದಿ

Change Language »
error: Content is protected !!