ಪಾಟ್ನಾ : ಬಿಹಾರದ ರಾಷ್ಟ್ರೀಯ ಜನತಾ ದಳ (RJD) ಲೀಡರ್ ಲಾಲೂ ಪ್ರಸಾದ್ ಯಾದವ್ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರಿಗೆ ‘Z’ ಕೆಟಗರಿಯ ಭದ್ರತೆಯನ್ನು ಬಿಹಾರ (Bihar) ಸರ್ಕಾರವು ಶನಿವಾರ ಮರುಸ್ಥಾಪಿಸಿದೆ. ಬಿಹಾರ ಗೃಹ ಇಲಾಖೆಯ ವಿಶೇಷ ವಿಭಾಗವು (Special Branch) ಈ ಕುರಿತು ಆದೇಶ ಹೊರಡಿಸಿದ್ದು, ರಾಜ್ಯ ಭದ್ರತಾ ಸಮಿತಿಯ (State Security Committee) ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ನೂತನ ಭದ್ರತಾ ಶಿಷ್ಟಾಚಾರದ ಅಡಿಯಲ್ಲಿ ಇಬ್ಬರೂ ಹಿರಿಯ ನಾಯಕರಿಗೆ ಪ್ರತ್ಯೇಕ ಬುಲೆಟ್‌ಪ್ರೂಫ್ ವಾಹನ ಹಾಗೂ ವಿಶೇಷ ಹೆಚ್‌ಕ್ಯೂಆರ್‌ಟಿ (Headquarters Reaction Team) ಕಮಾಂಡೋಗಳ ರಕ್ಷಣೆಯನ್ನು ಒದಗಿಸಲಾಗುತ್ತದೆ.
ಸಿಬ್ಬಂದಿಯನ್ನೇ ಹೊರಹಾಕಿದ್ದ ಲಾಲೂ ದಂಪತಿ
ಕಳೆದ ಜೂನ್ 6 ರಂದು ಬಿಹಾರ ಸರ್ಕಾರವು ಲಾಲೂ ಪ್ರಸಾದ್ ಹಾಗೂ ರಾಬ್ರಿ ದೇವಿ ಅವರಿಗೆ ನೀಡಲಾಗಿದ್ದ ‘Z-Plus’ ಭದ್ರತೆ ದಿಢೀರನೇ ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಲಾಲೂ ದಂಪತಿ, ಪಾಟ್ನಾದ’10 ಸರ್ಕ್ಯುಲರ್ ರೋಡ್ ನಿವಾಸದ ಹೊರಗೆ ನಿಯೋಜನೆಗೊಂಡಿದ್ದ ಬಿಹಾರ ಸರ್ಕಾರದ ಇತರೆ ಎಲ್ಲಾ ಕಾವಲು ಸಿಬ್ಬಂದಿಯನ್ನು ತಾವೇ ಖುದ್ದಾಗಿ ಹೊರಗೆ ಕಳುಹಿಸುವ ಮೂಲಕ ಸರ್ಕಾರದ ಪ್ರೋಟೋಕಾಲ್ ವಿರುದ್ಧ ಪ್ರತಿಭಟನೆ ದಾಖಲಿಸಿದ್ದರು.
ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್
ಭದ್ರತೆ ಕಡಿತದ ಬೆನ್ನಲ್ಲೇ, ಮಾಜಿ ಸಿಎಂ ರಾಬ್ರಿ ದೇವಿ ಅವರು ಸದ್ಯ ವಾಸವಿರುವ 10 ಸರ್ಕ್ಯುಲರ್ ರೋಡ್ ಬಂಗಲೆಯನ್ನು ತಕ್ಷಣವೇ ಖಾಲಿ ಮಾಡುವಂತೆ ಬಿಹಾರ ಸರ್ಕಾರ ನೋಟಿಸ್ ಜಾರಿ ಮಾಡಿತ್ತು. ಪ್ರಸ್ತುತ ಈ ಬಂಗಲೆಯನ್ನು ಬಿಹಾರದ ಸಚಿವರಾದ ನಂದ ಕಿಶೋರ್ ರಾಮ್ ಅವರಿಗೆ ಹಂಚಿಕೆ ಮಾಡಲಾಗಿದೆ. ರಾಬ್ರಿ ದೇವಿ ಅವರಿಗೆ ಬಿಹಾರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ (LoP) ಕೋಟಾದಡಿ ಈಗಾಗಲೇ ಹಾರ್ಡಿಂಜ್ ರೋಡ್‌ನಲ್ಲಿ ಪರ್ಯಾಯ ಸರ್ಕಾರಿ ನಿವಾಸವನ್ನು ನೀಡಲಾಗಿದ್ದರೂ, ಅವರು ಇನ್ನು ಹೊಸ ಮನೆಗೆ ಶಿಫ್ಟ್ ಆಗಿಲ್ಲ ಎಂದು ಸರ್ಕಾರ ನೋಟಿಸ್‌ನಲ್ಲಿ ಉಲ್ಲೇಖಿಸಿತ್ತು.
ಸರ್ಕಾರಿ ಬಂಗಲೆ ಯಾರದ್ದೂ ಪಿತ್ರಾರ್ಜಿತ ಆಸ್ತಿಯಲ್ಲ
ಇದೇ ವಿಚಾರವಾಗಿ ಶೇಖ್‌ಪುರಾದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಮಾಜಿ ಸಿಎಂಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಮತ್ತು ಸರ್ಕಾರಿ ಬಂಗಲೆಗಳು ಸಾರ್ವಜನಿಕರ ಸ್ವತ್ತೇ ಹೊರತು, ಅದು ಯಾರದೇ ವೈಯಕ್ತಿಕ ಜಾಗ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲ. ನಾನು ನನ್ನ ಅಧಿಕಾರಾವಧಿ ಮುಗಿದ ಕೇವಲ 24 ಗಂಟೆಗಳ ಒಳಗಾಗಿ ಸರ್ಕಾರಿ ವಸತಿಗೃಹವನ್ನು ಖಾಲಿ ಮಾಡಿದ್ದೆ, ಎಂದು ಲಾಲೂ ಕುಟುಂಬಕ್ಕೆ ತಿರುಗೇಟು ನೀಡಿದ್ದರು.
ಈ ಎಲ್ಲಾ ರಾಜಕೀಯ ವಾಕ್ಸಮರಗಳ ನಡುವೆಯೂ, ಬಿಹಾರದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಹಿರಿಯ ನಾಯಕರ ಜೀವ ರಕ್ಷಣೆಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ, ಇದೀಗ ಅಧಿಕೃತವಾಗಿ ‘Z’ ಕೆಟಗರಿ ಭದ್ರತೆಯನ್ನು ಮರುಸ್ಥಾಪಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ವಿವಾದ, “ರಾಮ್-ರಾಮ್” ಎಂದ ಮೋಹನ್ ಭಾಗವತ್!