Thursday, July 16, 2026
Homeಟಾಪ್ ನ್ಯೂಸ್PRADEEP ESHWAR: ಶಾಸಕ ಪ್ರದೀಪ್ ಈಶ್ವರ್‌ಗೆ ಜೀವಬೆದರಿಕೆ ಹಾಕಿದ ಆರೋಪ: ಎಚ್‌ಡಿಕೆ ಅಭಿಮಾನಿಗಳ ವಿರುದ್ಧದ ತನಿಖೆಗೆ...

PRADEEP ESHWAR: ಶಾಸಕ ಪ್ರದೀಪ್ ಈಶ್ವರ್‌ಗೆ ಜೀವಬೆದರಿಕೆ ಹಾಕಿದ ಆರೋಪ: ಎಚ್‌ಡಿಕೆ ಅಭಿಮಾನಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ!

ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಿರುದ್ಧ ಘೋಷಣೆ ಕೂಗಿ, ನಿಂದನೆ ಹಾಗೂ ಪ್ರಾಣ ಬೆದರಿಕೆ ಒಡ್ಡಿದ ಆರೋಪದಡಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬೆಂಬಲಿಗರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ.

ಹೈಕೋರ್ಟ್‌ ಮೆಟ್ಟಿಲೇರಿದ್ದ ಆರೋಪಿಗಳು
ತಮ್ಮ ವಿರುದ್ಧ ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ (FIR) ಮತ್ತು ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು ಎಂದು ಕೋರಿ ಆರೋಪಿಗಳಾದ ಮೋಹನ್ ರಾಜ್, ಅಕ್ಕುಲ ರೆಡ್ಡಿ, ಮಹೇಂದ್ರ ಟಿ.ಎಸ್. ಹಾಗೂ ಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠವು, ಅರ್ಜಿದಾರರ ವಿರುದ್ಧದ ಮುಂದಿನ ಎಲ್ಲಾ ರೀತಿಯ ತನಿಖಾ ಕ್ರಮಗಳಿಗೆ ಬ್ರೇಕ್ ಹಾಕಿದೆ.

ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಹೈಕೋರ್ಟ್, ಘಟನೆ ನಡೆದ ದಿನ ಕಾರ್ಯಕ್ರಮದಲ್ಲಿ ಸುಮಾರು 800ಕ್ಕೂ ಹೆಚ್ಚು ಮಂದಿ ಹಾಜರಿದ್ದರು ಎಂದು ಹೇಳಲಾಗಿದೆ. ಅಷ್ಟೊಂದು ಜನರಿದ್ದ ಗುಂಪಿನಲ್ಲಿ ಕೇವಲ ಈ ನಾಲ್ವರನ್ನು ಮಾತ್ರವೇ ಗುರಿಯಾಗಿಸಿ ಎಫ್‌ಐಆರ್ ದಾಖಲಿಸಿರುವುದು ಏಕೆ ಎಂದು ಅಚ್ಚರಿ ವ್ಯಕ್ತಪಡಿಸಿತು. ಸದ್ಯ ತನಿಖೆಗೆ ತಡೆ ನೀಡಿರುವ ಕೋರ್ಟ್, ಪ್ರಕರಣದ ಪ್ರತಿವಾದಿಗಳಾದ ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣಾಧಿಕಾರಿ ಹಾಗೂ ದೂರು ನೀಡಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಎಸ್.ಎಂ. ಅಮರ್ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಮುಂದೂಡಿದೆ.

ಏನಿದು ವಿವಾದ?: ಶೂ ಎಸೆತದ ಆರೋಪ
ಹಿಂದಿನ ಜೂನ್ 27 ರಂದು ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಪಾಲ್ಗೊಂಡಿದ್ದರು. ಈ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಶಾಸಕರು ಈ ಹಿಂದೆ ನೀಡಿದ್ದ ಹೇಳಿಕೆಯೊಂದರ ಕುರಿತು ಆಕ್ರೋಶಗೊಂಡಿದ್ದ ಎಚ್‌ಡಿಕೆ ಅಭಿಮಾನಿಗಳು ಶಾಸಕರನ್ನು ಮುತ್ತಿಗೆ ಹಾಕಿದ್ದರು.

ಬೆಳಗ್ಗೆ 11:30ರ ಸುಮಾರಿಗೆ ನಡೆದ ಈ ಗಲಾಟೆಯಲ್ಲಿ ಶಾಸಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ, ಜೀವ ಬೆದರಿಕೆ ಹಾಕಲಾಗಿತ್ತು ಹಾಗೂ ಅವರ ಮೇಲೆ ಶೂ ಎಸೆಯಲಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸ್ಥಳದಲ್ಲಿದ್ದ ಪಿಎಸ್‌ಐ ಎಸ್.ಎಂ. ಅಮರ್ ಅವರು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಬೆದರಿಕೆ ಆರೋಪದಡಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು. ಪೊಲೀಸರು ಹೂಡಿದ್ದ ಈ ಕ್ರಿಮಿನಲ್ ಮೊಕದ್ದಮೆಯ ತನಿಖೆಗೆ ಈಗ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಇದನ್ನೂ ಓದಿ : ಅಣ್ಣನ ಪ್ರೀತಿ ಕಳೆದುಕೊಂಡ ತಮ್ಮನಿಗೂ ಇದೆ ಪರಿಹಾರದ ಹಕ್ಕು: ಬಿ.ಟೆಕ್ ವಿದ್ಯಾರ್ಥಿ ಸಾವು ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ಹೆಚ್ಚಿನ ಸುದ್ದಿ

Change Language »
error: Content is protected !!