ಬೆಂಗಳೂರು : ವಿಶ್ವ ಬ್ಯಾಂಕ್‌ನ (World Bank )ಇತ್ತೀಚಿನ ಜಾಗತಿಕ ಆದಾಯ ವರ್ಗೀಕರಣದ ವರದಿಯ ಪ್ರಕಾರ, ಭಾರತದ ಆರ್ಥಿಕತೆಯು ಒಟ್ಟಾರೆಯಾಗಿ ಕೆಳ-ಮಧ್ಯಮ ಆದಾಯದ ಮಟ್ಟದಲ್ಲಿದ್ದರೂ, ಕರ್ನಾಟಕ (Karnataka) ಸೇರಿದಂತೆ ದೇಶದ ಪ್ರಮುಖ ಐದು ರಾಜ್ಯಗಳು ಯಶಸ್ವಿಯಾಗಿ ‘ಮೇಲ್ಮಧ್ಯಮ ಆದಾಯ’ (Upper Middle Income) ಮಟ್ಟದ ಮಿತಿಯನ್ನು ದಾಟಿ ಹೊಸ ಇತಿಹಾಸ ಸೃಷ್ಟಿಸಿವೆ.
ಈ ಅತ್ಯುನ್ನತ ಆರ್ಥಿಕ ಮೈಲಿಗಲ್ಲನ್ನು ಸಾಧಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಭರ್ಜರಿ ಪ್ರಗತಿಯೊಂದಿಗೆ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ. ತಲಾ ಆದಾಯದ ಆಧಾರದ ಮೇಲೆ ಸಿದ್ಧಪಡಿಸಲಾದ ಈ ಜಾಗತಿಕ ಪಟ್ಟಿಯಲ್ಲಿ ನೆರೆಯ ತಮಿಳುನಾಡು ರಾಜ್ಯವನ್ನು ಮೀರಿಸಿ ಕರುನಾಡು ಮುನ್ನಡೆ ಸಾಧಿಸಿರುವುದು ವಿಶೇಷವಾಗಿದೆ.
ವಿಶ್ವ ಬ್ಯಾಂಕ್ ಮಾನದಂಡಗಳ ಅನ್ವಯ 4,636 ಡಾಲರ್‌ನಿಂದ 14,375 ಯುಎಸ್ ಡಾಲರ್ ಆಸುಪಾಸಿನಲ್ಲಿದ್ದರೆ ಅದನ್ನು ಮೇಲ್ಮಧ್ಯಮ ಆದಾಯದ ವರ್ಗ ಎನ್ನಲಾಗುತ್ತದೆ. ಪ್ರಸ್ತುತ ದೇಶದ ಟಾಪ್-5 ರಾಜ್ಯಗಳ ಪಟ್ಟಿಯಲ್ಲಿ ದೆಹಲಿ (6,217 ಡಾಲರ್) ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು 5,579 ಯುಎಸ್ ಡಾಲರ್ ತಲಾ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ.
ವಿಶ್ವ ಬ್ಯಾಂಕ್‌ನ ಈ ಟಾಪ್-5 ಪಟ್ಟಿಯಲ್ಲಿ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಮೂರು ರಾಜ್ಯಗಳೇ ಮೇಲುಗೈ ಸಾಧಿಸಿವೆ. ರಾಜ್ಯದಲ್ಲಿ ತಂತ್ರಜ್ಞಾನ ವಲಯ (IT), ಜಾಗತಿಕ ಹೂಡಿಕೆ ಕೇಂದ್ರಗಳು (GCCs) ಮತ್ತು ಉದ್ಯಮ ಸ್ನೇಹಿ ವಾತಾವರಣವು ಈ ಭಾರಿ ಆರ್ಥಿಕ ಜಿಗಿತಕ್ಕೆ ಮುಖ್ಯ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ : ಅಂಬುಲೆನ್ಸ್‌ಗೆ ಜಾಗ ಬಿಡದೆ ವೀಲಿಂಗ್ ಪುಂಡಾಟ – ಆರು ಮಂದಿ ಅಪ್ರಾಪ್ತರು ಅರೆಸ್ಟ್!