ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಜಾರಿ ನಿರ್ದೇಶನಾಲಯ (ED) ಮತ್ತು ತೃಣಮೂಲ ಕಾಂಗ್ರೆಸ್ (TMC) ನಡುವಿನ ಸಂಘರ್ಷ ತಾರಕಕ್ಕೇರಿದೆ. ರಾಜಕೀಯ ತಂತ್ರಗಾರಿಕೆ ಸಂಸ್ಥೆ ‘ಐ-ಪ್ಯಾಕ್’ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ನಡೆದ ಇಡಿ ದಾಳಿ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ‘ಕೇವಿಯಟ್’ ಸಲ್ಲಿಸಿದ್ದು, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಾದವನ್ನು ಆಲಿಸದೆ ಯಾವುದೇ ಪ್ರತಿಕೂಲ ಆದೇಶ ಅಥವಾ ನಿರ್ದೇಶನ ನೀಡಬಾರದು ಎಂದು ಮನವಿ ಮಾಡಿದೆ. ಸಾಂವಿಧಾನಿಕ ನ್ಯಾಯಾಲಯಗಳಲ್ಲಿ, ಪ್ರತಿವಾದಿಯ ಅನುಪಸ್ಥಿತಿಯಲ್ಲಿ ಏಕಪಕ್ಷೀಯ ನಿರ್ಧಾರವಾಗುವುದನ್ನು ತಡೆಯಲು ಕೇವಿಯಟ್ ಸಲ್ಲಿಸಲಾಗುತ್ತದೆ.
ಇಡಿ ಆರೋಪವೇನು..?: ಕೋಟ್ಯಂತರ ರೂಪಾಯಿ ಮೌಲ್ಯದ ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಗುರುವಾರ ಕೋಲ್ಕತ್ತಾದಲ್ಲಿ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಥಳಕ್ಕೆ ಆಗಮಿಸಿ, ತನಿಖಾಧಿಕಾರಿಗಳ ವಶದಲ್ಲಿದ್ದ ‘ಪ್ರಮುಖ ಸಾಕ್ಷ್ಯ’ಗಳನ್ನು (ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳು) ತೆಗೆದುಕೊಂಡು ಹೋಗಿದ್ದಾರೆ ಎಂದು ಇಡಿ ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಇಡಿ ಕೋಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮುಖ್ಯಮಂತ್ರಿಗಳ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯಿಸಿದೆ. ಅಲ್ಲದೆ ಪಶ್ಚಿಮ ಬಂಗಾಳ ಪೊಲೀಸರು ಮುಖ್ಯಮಂತ್ರಿಗೆ ಸಹಾಯ ಮಾಡಿ, ಕಾನೂನು ಉಲ್ಲಂಘಿಸಿದ್ದಾರೆ ಎಂದು ಇಡಿ ದೂರಿದೆ.
ಇದನ್ನೂ ಓದಿ: ಕನ್ನಡ ಶಾಲೆಗಳಲ್ಲಿ ಮಲೆಯಾಳಂ ಕಡ್ಡಾಯ ವಿಚಾರ- ಕರ್ನಾಟಕದ ಆಕ್ಷೇಪಕ್ಕೆ ಕೇರಳ ಸಿಎಂ ಸ್ಪಷ್ಟನೆ
ಸಮರ್ಥಿಸಿಕೊಂಡ ದೀದಿ: ಶುಕ್ರವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಕೊಲ್ಲಲು ಬಂದಿದ್ದೀರಾ? ನನಗೆ ನನ್ನ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ. ಚುನಾವಣೆಗೆ ಸಂಬಂಧಿಸಿದ ಟಿಎಂಸಿಯ ಡೇಟಾವನ್ನು ಕದಿಯಲು ಇ.ಡಿ ಬಂದಿತ್ತು ಎಂದು ಮಮತಾ ಸಮರ್ಥಿಸಿಕೊಂಡಿದ್ದರು. ಇಡಿ ಅಧಿಕಾರಿಗಳು ಮುಂಜಾನೆಯೇ ಬಂದಿದ್ದರು, ನಾನು ಹೋದಾಗ ತಡವಾಗಿತ್ತು, ಆಗಲೇ ಅವರು ಏನೇನೋ ದಾಖಲೆ ತೆಗೆದಿದ್ದರು ಎಂದು ಅವರು ಹೇಳಿದ್ದರು.
ಬಿಜೆಪಿ ಖಂಡನೆ: ಮಮತಾ ನಡೆಯನ್ನು ಖಂಡಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಇದು ಅನೈತಿಕ, ಬೇಜವಾಬ್ದಾರಿ ಮತ್ತು ಸಂವಿಧಾನ ಬಾಹಿರ ನಡೆ. ಖಾಸಗಿ ಕಂಪನಿಯ ತನಿಖೆಯಲ್ಲಿ ಮುಖ್ಯಮಂತ್ರಿ ಏಕೆ ಹಸ್ತಕ್ಷೇಪ ಮಾಡಿದರು? ತಮ್ಮನ್ನು ಮತ್ತು ತಮ್ಮ ಪಕ್ಷವನ್ನು ಸಿಕ್ಕಿಹಾಕಿಸುವ ಸೂಕ್ಷ್ಮ ದಾಖಲೆಗಳನ್ನು ಕಾಪಾಡಲು ಅವರು ಹೀಗೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದೆಡೆ ಐ-ಪ್ಯಾಕ್ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಇದು ಆತಂಕಕಾರಿ ಬೆಳವಣಿಗೆ. ನಾವು ವೃತ್ತಿಪರರು. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಿಗೂ ಸಲಹೆ ನೀಡಿದ್ದೇವೆ. ನಾವು ಕಾನೂನಿಗೆ ಸಹಕರಿಸುತ್ತೇವೆ ಎಂದು ತಿಳಿಸಿದೆ.