ಅಮೃತಸರ: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್‌ಐ (ISI) ಬೆಂಬಲಿತ ಎರಡು ಉಗ್ರ ಮಾಡ್ಯೂಲ್‌ಗಳನ್ನು (Terrorist Arrest) ಭೇದಿಸಿರುವ ಅಮೃತಸರ (Amritsar) ಮತ್ತು ದೆಹಲಿ (New Delhi) ಪೊಲೀಸರು, ಒಟ್ಟು ಒಂಬತ್ತು ಶಂಕಿತರನ್ನು (Big News) ಬಂಧಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಬಂಧಿತರಿಂದ ನಾಲ್ಕು ಪೆಟ್ರೋಲ್ ಬಾಂಬ್‌ಗಳು, ಮೂರು ಪಿಸ್ತೂಲ್‌ಗಳು, ಜೀವಂತ ಗುಂಡುಗಳು, ಬೈಕ್ ಹಾಗೂ ಲೈಟರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಮೃತಸರ ಪೊಲೀಸ್ ಕಮಿಷನರ್ ಗುರುಪ್ರೀತ್ ಸಿಂಗ್ ಭುಲ್ಲರ್ ಮಾಹಿತಿ ನೀಡಿ, ಬಂಧಿತರಲ್ಲಿ ಹಲವರು ತರ್ನ್ ತಾರನ್ ಜಿಲ್ಲೆಯವರಾಗಿದ್ದು, ಹವಾಲಾ ಮಾರ್ಗದ ಮೂಲಕ ಇವರಿಗೆ ಆರ್ಥಿಕ ನೆರವು ನೀಡುತ್ತಿದ್ದ ಸುಖ್‌ದೇವ್ ಮತ್ತು ಅನ್ಮೋಲ್ ಎಂಬಿಬ್ಬರನ್ನು ಸಹ ಸೆರೆಹಿಡಿಯಲಾಗಿದೆ. ಈ ಜಾಲದಲ್ಲಿದ್ದ ಹೆಚ್ಚಿನವರು ಅಪ್ರಾಪ್ತರಾಗಿದ್ದು, ಅಮೃತಸರ-ಜಲಂಧರ್ ರೈಲ್ವೇ ಹಾದಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಹಾಗೂ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳ ಮೇಲೆ ಕಣ್ಣಿಟ್ಟು ವೀಡಿಯೊ ಚಿತ್ರೀಕರಿಸುವ ಕೆಲಸವನ್ನು ಇವರಿಗೆ ವಹಿಸಲಾಗಿತ್ತು.
ಜಂತರ್ ಮಂತರ್ ಬಳಿ ಭಾರಿ ದಾಳಿ ನಡೆಸಲು ಸಂಚು
ಅಲ್ಲದೆ, ಈ ಶಂಕಿತ ಉಗ್ರರು ದೆಹಲಿಯ ಜಂತರ್ ಮಂತರ್ ಬಳಿ ಭಾರಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಈ ಉದ್ದೇಶಕ್ಕಾಗಿ ಎಂಟು ಮಂದಿ ರೈಲಿನಲ್ಲಿ ದೆಹಲಿಗೆ ಪ್ರಯಾಣಿಸಿ, ಸ್ಥಳೀಯವಾಗಿ ಪೆಟ್ರೋಲ್ ಬಾಂಬ್ ತಯಾರಿಕೆಗೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿ ಮರಳಿದ್ದರು ಎಂಬ ಆಘಾತಕಾರಿ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೊಂದೆಡೆ, ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಸಹ ಗ್ಯಾಂಗ್‌ಸ್ಟರ್ ಶಹಜಾದ್ ಭಾಟಿ ನೆಟ್‌ವರ್ಕ್‌ಗೆ ಸೇರಿದ ಎರಡು ಉಗ್ರ ಮತ್ತು ಶಸ್ತ್ರಾಸ್ತ್ರ ಸರಬರಾಜು ಮಾಡ್ಯೂಲ್‌ಗಳನ್ನು ಭೇದಿಸಿ, ದೆಹಲಿ ಮತ್ತು ಪಂಜಾಬ್‌ನಲ್ಲಿ ಒಟ್ಟು ಏಳು ಮಂದಿಯನ್ನು ಬಂಧಿಸಿದೆ.
ದೆಹಲಿಯಲ್ಲಿ ಬಂಧಿತರಾದ ಸಲ್ಮಾನ್ ಮತ್ತು ದಾನಿಶ್ ಅಲಿಯಾಸ್ ಚಂದ್ ಮಿಯಾ ಎಂಬಿಬ್ಬರಿಗೆ ನಗರದಲ್ಲಿ ಪೆಟ್ರೋಲ್ ಬಾಂಬ್ ಎಸೆಯುವ ಜವಾಬ್ದಾರಿ ನೀಡಲಾಗಿತ್ತು. ಇವರಿಂದ ಪೆಟ್ರೋಲ್ ಬಾಂಬ್‌ಗಳು ಮತ್ತು ಕಳುವಾದ ಬೈಕ್ ಜಪ್ತಿ ಮಾಡಲಾಗಿದೆ. ಶಹಜಾದ್ ಭಾಟಿ ಸಹಚರ ಹುನೈನ್ ರಾಣಾ ಎಂಬಾತ ಈ ಜಾಲವನ್ನು ನಿಯಂತ್ರಿಸುತ್ತಿದ್ದ ಎಂದು ದೆಹಲಿ ಪೊಲೀಸ್ ಹೆಚ್ಚುವರಿ ಕಮಿಷನರ್ ಪ್ರಮೋದ್ ಸಿಂಗ್ ಕುಶ್ವಾಹ್ ತಿಳಿಸಿದ್ದಾರೆ. ಎರಡನೇ ತಂಡದಲ್ಲಿ ಶಾಹೀನ್ ಬಾಗ್ ನಿವಾಸಿ ತಯ್ಯಬ್, ಆತನ ಭಾವ ಅಲಿ ಫಜಲ್, ಝುಬೇರ್ ಮತ್ತು ಅಮೃತಸರದ ಮಲ್ಕೀತ್ ಎಂಬಿಬ್ಬರು ಭಾಗಿಯಾಗಿದ್ದು, ಇವರು ಗಡಿಯಾಚಿನಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ತಂದು ಅಪರಾಧ ಕೃತ್ಯಗಳಿಗೆ ಸರಬರಾಜು ಮಾಡುತ್ತಿದ್ದರು. ವಿವಿಧ ರಾಜ್ಯಗಳಿಗೆ ಹರಡಿರುವ ಈ ಸಂಘಟಿತ ಭಯೋತ್ಪಾದನಾ ಜಾಲದ ಕುರಿತು ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಪೋಸ್ಟ್ ತಡೆ ಕೇಸ್ : ಕ್ಷಮೆ ಯಾಚಿಸಿದ ಮೆಟಾ ಉನ್ನತಾಧಿಕಾರಿ ಜೋಯಲ್ ಕಪ್ಲಾನ್!