Sunday, January 25, 2026
Homeಟಾಪ್ ನ್ಯೂಸ್BIG NEWS: ಒಕ್ಕಲಿಗರನ್ನು ಕೆಣಕಬೇಡಿ, ಇಲ್ಲದಿದ್ದರೆ 1993ರ ಪರಿಸ್ಥಿತಿ ಮರುಕಳಿಸುತ್ತೆ : ಸರ್ಕಾರಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ...

BIG NEWS: ಒಕ್ಕಲಿಗರನ್ನು ಕೆಣಕಬೇಡಿ, ಇಲ್ಲದಿದ್ದರೆ 1993ರ ಪರಿಸ್ಥಿತಿ ಮರುಕಳಿಸುತ್ತೆ : ಸರ್ಕಾರಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ

ಬೆಂಗಳೂರು : ಸಿಎಂ ಕುರ್ಚಿಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar)​ ಪಟ್ಟು ಹಿಡಿದಿದ್ದಾರೆ. ಕನಕಪುರ ಬಂಡೆ ಪರ ಈಗಾಗಲೇ ಆಪ್ತ ಶಾಸಕರು ದೆಹಲಿಗೆ ತೆರಳಿ ಲಾಬಿ ಮಾಡಿ ಬಂದಿದ್ದಾರೆ. ಡಿಕೆಶಿ ಅಭಿಮಾನಿಗಳು, ಕಾರ್ಯಕರ್ತರು ಅಖಾಡಕ್ಕಿಳಿದ್ದಾರೆ. ಮುಂದಿನ ಸಿಎಂ ಡಿ.ಕೆ ಶಿವಕುಮಾರ್​ ಅನ್ನೋ ಘೋಷಣೆ ಮೊಳಗಿಸಿದ್ದಾರೆ. ಇಂಟರೆಸ್ತಿಂಗ್​ ಅಂದ್ರೆ ಇದೀಗ ಒಕ್ಕಲಿಗ ಶ್ರೀಗಳು ಕುರ್ಚಿ ಕಾಳಗದ ಅಖಾಡಕ್ಕೆ ಧುಮುಕಿದ್ದಾರೆ.

ಕನಕಪುರ ಬಂಡೆ​ ಪರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರು ಅಖಾಡಕ್ಕಿಳಿದಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಸಿಎಂ ಸ್ಥಾನ ನೀಡಬೇಕೆಂದು ಬ್ಯಾಟ್​ ಬೀಸಿದ್ದಾರೆ. ಡಿಕೆಶಿ ಪರ ಕಾಂಗ್ರೆಸ್​ ಹೈಕಮಾಂಡ್​ಗೆ ಆಗ್ರಹಿಸಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸಮಸ್ಯೆಯಾಗುವಂತಹ ಸಂದರ್ಭ ಬಂದರೆ 1993ರಲ್ಲಿ ನಡೆದಂತಹ ದೊಡ್ಡ ಹೋರಾಟಕ್ಕೆ ನಾಂದಿ ಆಗಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಸಮುದಾಯದವರು ಅಂದಿಗಿಂತಲೂ ಇಂದು ಹೆಚ್ಚು ಪ್ರಜ್ಞಾವಂತರಾಗಿದ್ದಾರೆ. ಹೆಚ್ಚಿನ ಸೌಕರ್ಯಗಳೂ ಈಗಿವೆ. ಒಂದು ವೇಳೆ ಅಂತಹ ಪರಿಸ್ಥಿತಿ ಮರುಕಳಿಸಿದರೆ ದೊಡ್ಡ ಹೋರಾಟಕ್ಕೆ ನಾಂದಿಯಾಗಲಿದೆ. ಸಮುದಾಯದ ಬಗ್ಗೆ ನಾಳೆ ಹೆಚ್ಚು ಮಾತನಾಡುವುದಾಗಿ ಹೇಳಿದರು.

ಅರಮನೆ ಮೈದಾನದಲ್ಲಿ ನಡೆದ ಉದ್ಯಮಿ ಒಕ್ಕಲಿಗ ಎಕ್ಸ್ ಪೊ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ‘ಸುತ್ತಮುತ್ತಲೂ ನಡೆಯುತ್ತಿರುವ ವಿಚಾರ ಗಮನಿಸಿದರೆ 1993ರ ಇತಿಹಾಸ ಮರುಕಳಿಸಬಹುದು. ಆ ರೀತಿ ಮರುಕಳಿಸದ ಹಾಗೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇದೆ’ ಎಂದು ಸಲಹೆ ಮಾಡಿದರು.

‘1993 ರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಒಕ್ಕಲಿಗರ ಬೃಹತ್‌ ರ‍್ಯಾಲಿ ಅಥವಾ ಹೋರಾಟವನ್ನು ನಡೆಸಲಾಗಿತ್ತು. ಅಂತಹ ಸಂದರ್ಭ ಸಮಸ್ಯೆ ಬಂದರೆ ಮತ್ತೆ ಆ ರೀತಿಯ ಹೋರಾಟ ಮರುಕಳಿಸಬಹುದು. ಅಂತಹ ಅವಕಾಶ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಕಾಲೀನ ವ್ಯವಸ್ಥೆ ಮೇಲಿದೆ’ ಎಂದು ಹೇಳಿದರು.

ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಕರೆ
ಇದು ಜ್ಞಾನ ಆಧಾರಿತ ಯುಗವಾಗಿದ್ದು ಬದುಕಿನಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕು. ಫಸ್ಟ್‌ ಸರ್ಕಲ್‌ ಆರಂಭಿಸಿರುವ ಉದ್ಯಮಿ ಒಕ್ಕಲಿಗ ಪರಿಕಲ್ಪನೆ ಚೆನ್ನಾಗಿದ್ದು, ಉದ್ಯಮ ಕ್ಷೇತ್ರದಲ್ಲಿ ದೂರದೃಷ್ಟಿ ಕೊಟ್ಟು ಜೊತೆಗೆ ಕರೆದೊಯ್ಯುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.

‘ಒಕ್ಕಲಿಗ ಸಮುದಾಯ ಕೇವಲ ಒಂದು ವಲಯದಲ್ಲಿ ಅಲ್ಲ, ಎಲ್ಲಾ ವಲಯದಲ್ಲೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ನಿರೀಕ್ಷಿತ ಫಲ ದೊರೆಯಲಿದೆ. ಫಸ್ಟ್‌ ಸರ್ಕಲ್‌ ಇನ್ನಷ್ಟು ಎತ್ತರಕ್ಕೆ ಬೆಳೆದು ಪ್ರವರ್ಧಮಾನಕ್ಕೆ ಬರಬೇಕು’ ಎಂದು ಹಾರೈಸಿದರು.

‘ಒಕ್ಕಲಿಗರು ಪ್ರವರ್ಧಮಾನಕ್ಕೆ ಬರಬೇಕು’
ಒಕ್ಕಲಿಗ ಸಮುದಾಯದ ಎಲ್ಲಾ ವಲಯಗಳೂ ಒಗ್ಗೂಡಬೇಕು ಹಾಗೂ ಆಯಾ ವಲಯಗಳಲ್ಲಿ ಪ್ರವರ್ಧಮಾನಕ್ಕೆ ಬರಬೇಕು. ಯುವ ಸಮುದಾಯ ಯೋಜಿಸಿ, ಅಧ್ಯಯನ ಮಾಡಿ ಉದ್ದಿಮೆಯನ್ನು ಸ್ಥಾಪಿಸಬೇಕೇ ಹೊರತು ಪೂರ್ವಿಕರು ಉಳಿಸಿರುವ ಜಮೀನನ್ನು ಮಾರಿಕೊಂಡು ಶೋಕಿ ಮಾಡಬಾರದು, ಉದ್ಯಮ ಆರಂಭಿಸಿದ ಮೇಲೆ ಅದರ ಬೆಳವಣಿಗೆ ಕಡೆ ಗಮನ ಹರಿಸಬೇಕು ಎಂದು ಶ್ರೀಗಳು ಹೇಳಿದರು.

ಇದನ್ನೂ ಓದಿ: ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ.. ಮತ್ತೆ ಡಿಕೆಶಿಗೆ ಟಕ್ಕರ್ ಕೊಟ್ಟ ರಾಜಣ್ಣ

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!