Thursday, July 16, 2026
Homeಟಾಪ್ ನ್ಯೂಸ್MYSURU: ದಸರಾ ಆನೆ 'ಕ್ಯಾಪ್ಟನ್' ಅಭಿಮನ್ಯುವಿನ ದಂತ ಮುರಿತ!

MYSURU: ದಸರಾ ಆನೆ ‘ಕ್ಯಾಪ್ಟನ್’ ಅಭಿಮನ್ಯುವಿನ ದಂತ ಮುರಿತ!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಜಂಬೂಸವಾರಿಯ ನೇತೃತ್ವ ವಹಿಸಿ, ಚಿನ್ನದ ಅಂಬಾರಿ ಹೊರುವ ಗಜಪಡೆ (Elephant) ನಾಯಕ ‘ಅಭಿಮನ್ಯು’ವಿನ (Captain Abhimanyu) ಎಡಭಾಗದ ದಂತವು ಸ್ವಲ್ಪ ಮಟ್ಟಿಗೆ ತುಂಡಾಗಿದೆ ಎನ್ನುವ ಮಾಹಿತಿ ಇದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದಲ್ಲಿ ಭಾರೀ ಗಾತ್ರದ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ಕೆಲಸದಲ್ಲಿ ತೊಡಗಿದ್ದಾಗ ಈ ಆಕಸ್ಮಿಕ ಘಟನೆ ಸಂಭವಿಸಿದೆ. ಹೀಗಾಗಿ ಈ ಬಾರಿಯ ದಸರಾ ಉತ್ಸವಕ್ಕೆ ಅಭಿಮನ್ಯು ತನ್ನ ದಂತವನ್ನು ಹೊಸದಾಗಿ ‘ಟ್ರೀಮ್’ ಮಾಡಿಕೊಂಡು ವಿಭಿನ್ನ ಶೈಲಿಯಲ್ಲಿ ಆಗಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ನಡೆದಿದ್ದೇನು?
ದುಬಾರೆ ಆನೆ ಶಿಬಿರದಲ್ಲಿ ನಡೆದ ಆನೆಗಳ ಕಾಳಗದ ದುರಂತದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಾಕಾನೆ ಶಿಬಿರಗಳಿಗೆ ಪ್ರವಾಸಿಗರ ಪ್ರವೇಶವನ್ನು ತಡೆಹಿಡಿಯಲಾಗಿತ್ತು. ಈ ಸಮಯದಲ್ಲಿ ಮತ್ತಿಗೋಡು ಕ್ಯಾಂಪ್‌ನಲ್ಲಿ ಮರದ ದಿಮ್ಮಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಕಾರ್ಯಾಚರಣೆ ನಡೆಯುತ್ತಿತ್ತು. 59 ವರ್ಷ ಪ್ರಾಯದ ಅಭಿಮನ್ಯು ಮರದ ದಿಮ್ಮಿಯೊಂದನ್ನು ಮೇಲೆತ್ತುವ ಸಂದರ್ಭದಲ್ಲಿ, ಬಲಭಾಗಕ್ಕೆ ತುಸು ಬಾಗಿದಂತಿದ್ದ ಆತನ ಎಡದಂತದ ಮುಂಭಾಗವು ಮುರಿದುಹೋಗಿದೆ. ಈ ಕುರಿತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಯಾವುದೇ ಅಧಿಕೃತ ಅಥವಾ ಸ್ಪಷ್ಟ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

ಸತತ 7ನೇ ಬಾರಿ ಅಂಬಾರಿ ಹೊರಲು ಸಜ್ಜು!
ದಂತಕ್ಕೆ ಸಣ್ಣ ಹಾನಿಯಾಗಿದ್ದರೂ, ಈ ಬಾರಿಯ ಮೈಸೂರು ದಸರಾದಲ್ಲಿ ಅಭಿಮನ್ಯುವೇ ಚಿನ್ನದ ಅಂಬಾರಿಯನ್ನು ಹೊರುವುದು ಶತಸಿದ್ಧವಾಗಿದೆ. 2020 ರಿಂದಲೂ ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿರುವ ಅಭಿಮನ್ಯು, ಈ ಬಾರಿ (2026) ಅಂಬಾರಿ ಹೊತ್ತರೆ ಸತತ 7ನೇ ಬಾರಿ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಕೀರ್ತಿಗೆ ಪಾತ್ರನಾಗಲಿದ್ದಾನೆ. ದಸರಾ ಇತಿಹಾಸದಲ್ಲಿ ಈ ಹಿಂದೆ ದ್ರೋಣ ಆನೆ 18 ಬಾರಿ, ಬಲರಾಮ 13 ಬಾರಿ ಹಾಗೂ ಅರ್ಜುನ ಸತತ 8 ಬಾರಿ ಅಂಬಾರಿ ಹೊತ್ತು ದಾಖಲೆ ಬರೆದಿದ್ದು, ಇದೀಗ ಅತಿ ಹೆಚ್ಚು ಬಾರಿ ಅಂಬಾರಿ ಹೊತ್ತ ಬಲಿಷ್ಠ ಆನೆಗಳ ಸಾಲಿಗೆ ಅಭಿಮನ್ಯು ಕೂಡ ಪ್ರಮುಖವಾಗಿ ಸೇರ್ಪಡೆಯಾಗುತ್ತಿದ್ದಾನೆ.

‘ಕರ್ನಾಟಕದ ಎಕೆ-47’ ಅಭಿಮನ್ಯುವಿನ ಇತಿಹಾಸ:

1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ವಲಯದಲ್ಲಿ ಈತನನ್ನು ಸೆರೆಹಿಡಿಯಲಾಗಿತ್ತು. ಸದ್ಯ ಅಭಿಮನ್ಯು 2.72 ಮೀಟರ್ ಎತ್ತರ, 3.51 ಮೀಟರ್ ಉದ್ದ ಹಾಗೂ ಬರೋಬ್ಬರಿ 5,635 ಕೆಜಿ ತೂಕ ಹೊಂದಿದ್ದಾನೆ. ಕಳೆದ ಮೂರು ದಶಕಗಳಿಂದ ಅಂದರೆ 30 ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಈತ, 2012 ರಿಂದ 2015 ರವರೆಗೆ ಅರಮನೆಯ ರಥವನ್ನು ಎಳೆಯುತ್ತಿದ್ದನು. ಆ ನಂತರ ಶ್ರೀರಂಗಪಟ್ಟಣ ದಸರಾದಲ್ಲೂ ಅಂಬಾರಿ ಹೊತ್ತ ಅನುಭವ ಇವನಿಗಿದೆ.

ಕಾಡಾನೆಗಳನ್ನು ಸೆರೆಹಿಡಿಯುವಲ್ಲಿ ಪರಿಣಿತನಾಗಿರುವ ಈತನಿಗೆ ‘ಕೂಂಬಿಂಗ್ ಸ್ಟಾರ್’ ಹಾಗೂ ‘ಕರ್ನಾಟಕದ ಎಕೆ-47’ ಎಂಬ ಹೆಗ್ಗಳಿಕೆಗಳಿವೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲೇ ಅತ್ಯಂತ ಬಲಿಷ್ಠ ಸಾಕಾನೆ ಎಂಬ ಖ್ಯಾತಿ ಅಭಿಮನ್ಯುವಿನದ್ದಾಗಿದೆ. ಪ್ರಸ್ತುತ ಈ ಗಜರಾಜನನ್ನು ಮಾವುತರಾದ ಜೆ.ಎಸ್. ವಸಂತ್ ಹಾಗೂ ಜೆ.ಕೆ. ರಾಜು ಅವರು ಅತ್ಯಂತ ಪ್ರೀತಿ ಮತ್ತು ಜಾಗರೂಕತೆಯಿಂದ ಪಾಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಶಾಲಾ ಶಿಕ್ಷಣ ಇಲಾಖೆ ಬೋಧಕೇತರ ಸಿಬ್ಬಂದಿ ವರ್ಗಾವಣೆ ವೇಳಾಪಟ್ಟಿ ಪ್ರಕಟ

ಹೆಚ್ಚಿನ ಸುದ್ದಿ

Change Language »
error: Content is protected !!