ನವದೆಹಲಿ : ಸಂವಹನ ಕೊರತೆಯ ಕಾರಣಕ್ಕೆ ಭಾರತ (India) ಮತ್ತು ಅಮೆರಿಕ (America) ನಡುವೆ ವ್ಯಾಪಾರ ಒಪ್ಪಂದ ವಿಫಲವಾಗಿದೆ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕರೆ ಮಾಡದ ಕಾರಣಕ್ಕೆ ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ತಿಳಿಸಿದ್ದಾರೆ.
ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಲುಟ್ನಿಕ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿ ಮಾತನಾಡದ ಕಾರಣ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಷ್ಯಾದಿಂದ ಭಾರತ ತೈಲ ಖರೀದಿ ವಿಚಾರದಲ್ಲಿ ನಾನು ಸಂತೋಷವಾಗಿಲ್ಲ ಎಂದು ಪ್ರಧಾನಿ ಮೋದಿಗೆ ತಿಳಿದಿದೆ. ಅಮೆರಿಕ ಶೀಘ್ರದಲ್ಲೇ ಭಾರತದ ವಿರುದ್ಧ ಸುಂಕ ದರ ಹೆಚ್ಚಿಸಲಿದೆ ಎಂಬ ಟ್ರಂಪ್ ಹೇಳಿಕೆ ಬೆನ್ನಲ್ಲೇ ಲುಟ್ನಿಕ್ ಈ ಹೇಳಿಕೆ ಗಮನ ಸೆಳೆದಿದೆ. ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿರುವ ಸಮಯದಲ್ಲಿ ಅಮೆರಿಕ ಅಧ್ಯಕ್ಷರಿಂದ ಈ ಎಚ್ಚರಿಕೆ ಬಂದಿದೆ.
ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಹೊವಾರ್ಡ್ ಲುಟ್ನಿಕ್, ಒಪ್ಪಂದವನ್ನು ಮುಕ್ತಾಯಗೊಳಿಸಲು ಟ್ರಂಪ್ ಅವರಿಗೆ ಕರೆ ಮಾಡುವಂತೆ ಮೋದಿಗೆ ತಿಳಿಸಲಾಗಿತ್ತು. ಆದರೆ, ಭಾರತವು ಈ ರೀತಿ ಮಾಡುವುದು ನನಗೆ ಸರಿ ಹೊಂದುವುದಿಲ್ಲ ಎಂದು ಹೇಳಿತು. ಇದರಿಂದ ಮೋದಿ ಕರೆ ಮಾಡಲಿಲ್ಲ ಎಂದಿದ್ದಾರೆ.
‘ನಾನಿದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಅದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಪ್ಪಂದವಾಗಿತ್ತು. ಅದಕ್ಕಾಗಿ ಎಲ್ಲವನ್ನು ಮಾಡಿದ್ದರು. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರಿಗೆ ಕರೆ ಮಾಡಬೇಕಿತ್ತು. ಆದರೆ ಮೋದಿ ಕರೆ ಮಾಡಿರಲಿಲ್ಲ. ಅದಾದ ಬಳಿಕ ನಾವು ಮುಂದುವರಿದೆವು. ಮುಂದಿನ ವಾರ ಇಂಡೋನೇಷ್ಯಾ, ಫಿಲಿಪ್ಪೀನ್ಸ್, ವಿಯೆಟ್ನಾಂ ಜೊತೆ ಒಪ್ಪಂದಗಳನ್ನು ಘೋಷಿಸಿದೆವು’ ಎಂದು ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.
ಈ ವ್ಯಾಪಾರ ಮಾತುಕತೆ ಕುರಿತು ಭಾರತ ಮತ್ತು ಅಮೆರಿಕ ಸಮಾನಾಂತರ ಮಾತುಕತೆ ನಡೆಸಿದವು. ಸುಂಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚೌಕಟ್ಟು ರೂಪಿಸಿ ವ್ಯಾಪಾರ ಒಪ್ಪಂದವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿತ್ತು ಎಂದು ಲುಟ್ನಿಕ್ ವಿವರಿಸಿದ್ದಾರೆ.
2025ರ ಫೆಬ್ರವರಿಯಲ್ಲಿ ಎರಡು ದೇಶದ ನಾಯಕರು ಈ ಕುರಿತು ಮಾತುಕತೆಯಲ್ಲಿ ತೊಡಗಿದ್ದರು. 2025ರ ಚಳಿಗಾಲದಲ್ಲಿ ಮೊದಲ ಹಂತವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ಈ ಒಪ್ಪಂದ ಇನ್ನೂ ಪೂರ್ಣಗೊಳ್ಳದೆ ನಿಂತಿದ್ದು, ರಷ್ಯಾ ವಿಚಾರದಲ್ಲಿ ಅಮೆರಿಕ ಭಾರತದ ವಿರುದ್ಧ ಬಿಗಿ ನಿಲುವು ತಳೆಯುವಂತೆ ಮಾಡಿತು ಎಂದು ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.
ಇದನ್ನೂ ಓದಿ : ಟ್ರಂಪ್ ನಿಂದ ಪ್ರಧಾನಿ ಮೋದಿ ಅವಹೇಳನ – ಭಾರತಕ್ಕೆ ಮೌನವೇ ಆಭರಣ!