ಬೆಂಳೂರು : ರಾಜ್ಯ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕೊನೆಗೂ ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆಗೆ (Cabinet Reshuffle) ಸಿದ್ಧತೆ ನಡೆಸುತ್ತಿದ್ದು, ಅಸಮರ್ಥ, ಕೆಲಸ ಮಾಡದ ಸಚಿವರಿಗೆ ಗೇಟ್ಪಾಸ್ ಕೊಡುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರ ವರ್ತನೆಗಳ ಬಗ್ಗೆ ತೀವ್ರ ಆಕ್ರೋಶಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವರ ತಲೆದಂಡಕ್ಕೆ ಮುಂದಾಗಿದ್ದಾರೆ.
ಸಚಿವರು, ಶಾಸಕರುಗಳಿಗೆ ಸ್ಪಂದಿಸುತ್ತಿಲ್ಲ. ಸರ್ವಾಧಿಕಾರಿ ಧೋರಣೆ ಆನುಸರಿಸುತ್ತಿದ್ದಾರೆ. ಭೇಟಿಯಾಗಲೂ ಲಭ್ಯವಾಗುತ್ತಿಲ್ಲ ಎಲ್ಲವೂ ಸೇರಿದಂತೆ ಆಕ್ಷೇಪಗಳನ್ನು ಆಡಳಿತ ಶಾಸಕರು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸಂಪುಟ ಪುನಾರಚನೆ ಆದರೆ, 15 ರಿಂದ 17 ಹಾಲಿ ಸಚಿವರನ್ನ ಬದಲಿಸುವ ಸಾಧ್ಯತೆ ಇದೆಯಂತೆ. ಕೆಲವೇ ದಿನಗಳಲ್ಲಿ ಪುನಾರಚನೆ ಆಗಬಹುದು ಎನ್ನಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವದ ಬದಲಾವಣೆ ಲಕ್ಷಣಗಳು ಕಂಡು ಬರುತ್ತಿಲ್ಲ. ಹಿರಿಯ ಶಾಸಕರು ಇಂದು ಪ್ರತ್ಯೇಕ ಸಭೆ ನಡೆಸುವ ಮುನ್ನ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರ ಜೊತೆಯಲ್ಲೂ ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರು, ಹಿರಿಯ ಶಾಸಕರಿಗೆ ಅವಕಾಶ ಕಲ್ಪಿಸಬೇಕಾದರೆ, ಸಂಪುಟದಲ್ಲಿರುವ ಕೆಲ ಸಚಿವರನ್ನು ಕೈಬಿಡಬೇಕು. ಆ ರೀತಿಯ ಪುನರ್‌ರಚನೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಬೇಕು. ಈ ನಿಟ್ಟಿನಲ್ಲಿ ದೆಹಲಿಗೆ ಹೋದಾಗ ವರಿಷ್ಠರ ಮೇಲೆ ಒತ್ತಡ ಹೇರುವಂತೆ ಸಿದ್ದರಾಮಯ್ಯ ಹಿರಿಯ ಶಾಸಕರ ನಿಯೋಗಕ್ಕೆ ಸಲಹೆ ನೀಡಿದ್ದಾರೆ.
ಸಂಪುಟಕ್ಕೆ ಯಾರೆಲ್ಲ ಸೇರ್ಪಡೆ ಸಾಧ್ಯತೆ?
ಬಿ.ಕೆ.ಹರಿಪ್ರಸಾದ್ ಪರಿಷತ್ ಸದಸ್ಯ
ಎಂ ಕೃಷ್ಣಪ್ಪ ವಿಜಯನಗರ
ಪಿ.ಎಂ ನರೇಂದ್ರಸ್ವಾಮಿ ಮಳವಳ್ಳಿ
ಪುಟ್ಟರಂಗಶೆಟ್ಟಿ ಚಾಮರಾಜನಗರ
ಎಚ್.ಸಿ ಬಾಲಕೃಷ್ಣ ಮಾಗಡಿ
ಎಸ್.ಆರ್ ಶ್ರೀನಿವಾಸ್ ಗುಬ್ಬಿ
ಎಸ್.ಎನ್ ನಾರಾಯಣಸ್ವಾಮಿ ಬಂಗಾರಪೇಟೆ
ಅಪ್ಪಾಜಿ ನಾಡಗೌಡ ಮುದ್ದೇಬಿಹಾಳ
ಕೆ.ಎಂ ಶಿವಲಿಂಗೇಗೌಡ ಅರಸೀಕೆರೆ
ರೂಪಾ ಶಶಿಧರ್ ಕೆಜಿಎಫ್
ಡಾ.ಅಜಯ್ ಸಿಂಗ್ ಜೇವರ್ಗಿ
ಬೇಳೂರು ಗೋಪಾಲಕೃಷ್ಣ ಸಾಗರ
ಲಕ್ಷ್ಮಣ್ ಸವದಿ ಅಥಣಿ
ಕೆ.ಷಡಕ್ಷರಿ ತಿಪಟೂರು
ಯು.ಟಿ.ಖಾದರ್ ಉಲ್ಲಾಳ
ತನ್ವೀರ್ ಸೇಠ್ ನರಸಿಂಹರಾಜ
ಸಲೀಂ ಅಹ್ಮದ್ ಪರಿಷತ್ ಸದಸ್ಯ
ಜಾತಿ ಆಧಾರದಲ್ಲಿ ಸಂಪುಟ ಪುನಾರಚನೆ
ಜಾತಿ ಆಧಾರದ ಮೇಲೆ ಸಚಿವ ಸಂಪುಟ ಪುನರ್ ರಚನೆ ಆಗಲಿದೆ. ಒಂದೊಂದು ಜಾತಿಯಲ್ಲೂ ಒಂದಷ್ಟು ಜನ ಸಚಿವಾಕಾಂಕ್ಷಿಗಳು ಇದ್ದಾರೆ. ಈಡಿಗ ಸಮುದಾಯ ಸಚಿವ ಮಧು ಬಂಗಾರಪ್ಪಗೆ ಕೊಕ್ ಕೊಟ್ಟು, ಅದೇ ಸಮುದಾಯದ ಹರಿಪ್ರಸಾದ್ ಸಂಪುಟಕ್ಕೆ ಸೇರಿಸಿಕೊಳ್ಳಬಹುದು.
ಲಿಂಗಾಯತ ಸಮುದಾಯದ 4 ಸಚಿವರಿಗೆ ಕೊಕ್ ಕೊಡುವ ಸಾಧ್ಯತೆ ಇದೆ. ಶಿವಾನಂದ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಶರಣ್ ಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಸನಾಪುರನ್ನ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಒಟ್ಟು 15 ರಿಂದ 17 ಹಾಲಿ ಸಚಿವರಿಗೆ ಶಾಕ್ ನೀಡುವ ಸಾಧ್ಯತೆ ಇದೆ.
ಒಂದಷ್ಟು ಮಂದಿ ಸಿಎಂ ಸಿದ್ದರಾಮಯ್ಯ ಬಳಿ ಲಾಬಿ ನಡೆಸಿದ್ರೆ, ಇನ್ನೊಂದಷ್ಟು ಮಂದಿ ಡಿ.ಕೆ.ಶಿವಕುಮಾರ್ ಬಳಿ ಮಂತ್ರಿಗರಿಗಾಗಿ ಲಾಬಿ ನಡೆಸಿದ್ದಾರೆ. ಹಿರಿಯ ಶಾಸಕರು ನೇರವಾಗಿ ಹೈ ಕಮಾಂಡ್ ಬಳಿಯೇ ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಆದರೆ, ಸಂಪುಟ ಪುನಾರಚನೆ ವೇಳೆ ಯಾರಿಗೆ ಲಾಟರಿ ಹೊಡೆಯುತ್ತೋ ಕಾದು ನೋಡಬೇಕಿದೆ.