ಬೆಂಗಳೂರು: ಚಿತ್ರದುರ್ಗದ (Chitradurga) ಕಾಂಗ್ರೆಸ್ (Congress) ಶಾಸಕ ವೀರೇಂದ್ರ ಪಪ್ಪಿಯ (Veerendra Puppy) ಬಂಧನ ಕಾನೂನು ಬಾಹಿರ ಎಂದು ಘೋಷಿಸುವಂತೆ ಪತ್ನಿ ಚೈತ್ರಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅಕ್ರಮ ಹಣ ವರ್ಗಾವಣೆ ಹಾಗೂ ಅಕ್ರಮವಾಗಿ ಆನ್‌ಲೈನ್ ಬೆಟ್ಟಿಂಗ್ ಕಂಪನಿಗಳನ್ನು ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ವೀರೇಂದ್ರ ಪಪ್ಪಿಯನ್ನು ಬಂಧಿಸಲಾಗಿದೆ.
ಆಗಸ್ಟ್ 22 ರಂದು ವೀರೇಂದ್ರ ಪಪ್ಪಿಯವರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತ ವ್ಯವಹಾರ ಸಂಬಂಧ ಜಾಗ ಭೋಗ್ಯ ಪಡೆಯಲು ಸಿಕ್ಕಿಂನಾ ಗ್ಯಾಂಗ್ಟಕ್ಗೆ ಹೋಗುವಾಗ ಶಾಸಕರನ್ನು ಇಡಿ ಅಧಿಕಾರಿಗಳು ಬಂಧಿಸಿ ಸಿಕ್ಕಿಂ ನ್ಯಾಯಾಲಯಕ್ಕೆ ಹಾಜರು ಪಡಿಸಿ ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಇಡಿ ಅಧಿಕಾರಿಗಳು ಕರೆತಂದಿದ್ದಾರೆ. ನಂತರ ಬೆಂಗಳೂರಿನ 35ನೇ ಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ: ಸಚಿವ ಮಹದೇವಪ್ಪ ಹೆಸರಿನಲ್ಲಿ ಗ್ರಾಮಸ್ಥರಿಗೆ ವಂಚನೆ – ಲಕ್ಷ ಲಕ್ಷ ರೂ. ಟೋಪಿ ಹಾಕಿದ ಮಹಿಳೆ!
ಇದೀಗ ವೀರೇಂದ್ರ ಪಪ್ಪಿ ಅವರ ಹೇಳಿಕೆಯನ್ನು ಆಧರಿಸಿ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ ಮಾಡಿದ್ದು, ತೀವ್ರ ಶೋಧ ನಡೆಸಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆರಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ವೀರೇಂದ್ರ ಅವರ ಬ್ಯಾಂಕ್ ಖಾತೆಗಳ ಮೇಲೂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಈಗಾಗಲೇ ಇಡಿ ಅಧಿಕಾರಿಗಳು ಚಳ್ಳಕೆರೆ ನಗರದ ಕೋಟೆಕ್ ಮಹೇಂದ್ರ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್‌ಗೆ ತೆರಳಿ ವೀರೇಂದ್ರ ಪಪ್ಪಿ ಅವರ ಹಾಗು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಹಣ ವರ್ಗಾವಣೆ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ವೀರೇಂದ್ರ ಪಪ್ಪಿ ಅವರ ಬಳಿ 17 ಬ್ಯಾಂಕ್ ಖಾತೆಗಳಿದ್ದು, ಆದಷ್ಟು ಬ್ಯಾಂಕ್ ಗಳಲ್ಲಿ ಆಗಿರುವ ಹಣಕಾಸು ವರ್ಗಾವಣೆ ಬಗ್ಗೆ ಮಾಹಿತಿ, ದಾಖಲೆಯನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಬೆಟ್ಟಿಂಗ್ ಆಪ್‌ಗಳ ಮೂಲಕ ಗಳಿಸಿದ ಹಣವನ್ನು ಈ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡುವ ಮೂಲಕ ಅಕ್ರಮ ವ್ಯವಹಾರ ನಡೆಸಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ವೀರೇಂದ್ರ ಪಪ್ಪಿ ತನಿಖೆಗೆ ಅಸಹಕಾರ- ತಲೆ ಚಚ್ಚಿಕೊಂಡ ಇಡಿ ಅಧಿಕಾರಿಗಳು!
ಈ ಹಿಂದಿನ ದಾಳಿಯಲ್ಲಿ ವೀರೇಂದ್ರ ಅವರ ಮನೆಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿಯಷ್ಟು ನಗದು ಸಿಕ್ಕಿದ್ದರೆ, 1 ಕೋಟಿ ರೂಪಾಯಿ ವಿದೇಶಿ ಕರೆನ್ಸಿಗಳು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಸುಮಾರು 6 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಸುಮಾರು 10 ಕೆಜಿ ಬೆಳ್ಳಿ ಇಡಿ ಅಧಿಕಾರಿಗಳ ವಶಕ್ಕೆ ಪಡೆದಿದ್ದರು.
ಆನ್‌ಲೈನ್ ಬೆಟ್ಟಿಂಗ್, ಆಫ್‌ಲೈನ್ ಬೆಟ್ಟಿಂಗ್, ಅಕ್ರಮ ಹಣ ವರ್ಗಾವಣೆ ಆರೋಪವಿತ್ತು. ಇದೇ ಹಿನ್ನೆಲೆಯಲ್ಲಿ ಚಿತ್ರದುರ್ಗದ ಶಾಸಕರಿಗೆ ಸಂಬಂಧ ಪಟ್ಟ ಸುಮಾರು 31 ಸ್ಥಳದ ಮೇಲೆ ಇ.ಡಿ. ಅಧಿಕಾರಿಗಳು ರೇಡ್ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಚಿನ್ನದ ಸಾಮ್ರಾಜ್ಯವೇ ಸಿಕ್ಕಿದೆ.