Sunday, January 25, 2026
Homeಟಾಪ್ ನ್ಯೂಸ್BIG NEWS: ಸಿಎಂ, ಡಿಸಿಎಂ ನಿಯೋಗ ಶೀಘ್ರವೇ ರಾಷ್ಟ್ರಪತಿ ಭೇಟಿ- ಯಾಕೆ..?

BIG NEWS: ಸಿಎಂ, ಡಿಸಿಎಂ ನಿಯೋಗ ಶೀಘ್ರವೇ ರಾಷ್ಟ್ರಪತಿ ಭೇಟಿ- ಯಾಕೆ..?

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ (DK Shivakumar) ನೇತೃತ್ವದ ನಿಯೋಗ ಶೀಘ್ರವೇ ರಾಷ್ಟ್ರಪತಿ ದೌಪದಿ ಮುರ್ಮು (Droupadi Murmu) ಅವರನ್ನು ಭೇಟಿ ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇರಳ ಸರ್ಕಾರ ಅಂಗೀಕರಿಸಿರುವ ಮಲಯಾಳಂ ಭಾಷಾ ಮಸೂದೆಯು ಗಡಿ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಕಾಸರಗೋಡಿನ ಕನ್ನಡಿಗರ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಅದಕ್ಕೆ ಅನುಮೋದನೆ ನೀಡದಂತೆ ಕೋರಲು ಈ ಭೇಟಿ ನಡೆಯಲಿದೆ.

ಮಲಯಾಳಂ ಭಾಷಾ ಮಸೂದೆಯು ಕೇರಳದ ಗಡಿ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಾಸರಗೋಡಿನಲ್ಲಿ 7.5 ಲಕ್ಷ ಕನ್ನಡಿಗರಿದ್ದು, 210 ಕನ್ನಡ ಮಾಧ್ಯಮ ಶಾಲೆಗಳಿವೆ. ಸಂವಿಧಾನದ 350ಬಿ ವಿಧಿಯ ನಿಬಂಧನೆಗಳ ಅಡಿ, ಕೇರಳ ಸರ್ಕಾರ ಕಳುಹಿಸಿರುವ ಮಸೂದೆಗೆ ಅನುಮೋದನೆ ನೀಡದಂತೆ ರಾಷ್ಟ್ರಪತಿಗಳನ್ನು ಒತ್ತಾಯಿಸುತ್ತೇವೆ ಎಂದರು.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರ ಕೇಸ್, ಇದು ಮಹೇಶ್​ ಟೆಂಗಿನಕಾಯಿ ಟೂಲ್​​​ಕಿಟ್​​ ಎಂದ ರಜತ ಉಳ್ಳಾಗಡ್ಡಿಮಠ

ಈ ಸಂಬಂಧ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದೇವೆ. ಮಲಯಾಳಂ ಭಾಷಾ ಮಸೂದೆಗೆ ಅನುಮೋದನೆ ಕೊಡದಂತೆ ಕೇರಳ ರಾಜ್ಯಪಾಲರನ್ನು ಒತ್ತಾಯಿಸುತ್ತೇವೆ. ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿರುವ ಮಸೂದೆಯ ಕುರಿತು ಕೇರಳ ಮುಖ್ಯಮಂತ್ರಿಗೆ ಪತ್ರ ಬರೆಯುವಂತೆಯೂ ಕೇಳಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿತರೊಂದಿಗೆ ಚರ್ಚಿಸಲಾಗುವುದು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವೂ ಮಸೂದೆ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಅವರು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬಿಜೆಪಿ ನಾಯಕರಿಗೆ ಸರ್ಕಾರದ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್‌ನಲ್ಲಿ ಉತ್ತಮ ವಾತಾವರಣವೇ ಇದ್ದರೂ, ನಾಯಕತ್ವದ ಸಮಸ್ಯೆ ಎತ್ತುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಕೇವಲ ದ್ವೇಷದ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಜಾರಿಗೆ ತಂದಿದ್ದ ಯೋಜನೆಗಳ ಹೆಸರು ಬದಲಿಸಿರುವುದೇ ಬಿಜೆಪಿಯ ದೊಡ್ಡ ಸಾಧನೆ. ದೊಡ್ಡ ಉದ್ಯಮಿಗಳಿಗೆ ಲಾಭ ಮಾಡುವ ದೃಷ್ಟಿಯಿಂದ ನರೇಗಾ ಯೋಜನೆ ಹೆಸರು ಬದಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!