Thursday, July 16, 2026
Homeಟಾಪ್ ನ್ಯೂಸ್BIG NEWS: ಕರುನಾಡಿಗೆ ಬರದ ಆತಂಕ, ಕುಡಿಯುವ ನೀರು ಪೋಲು ಮಾಡಿದರೆ 5 ಸಾವಿರ ದಂಡ!

BIG NEWS: ಕರುನಾಡಿಗೆ ಬರದ ಆತಂಕ, ಕುಡಿಯುವ ನೀರು ಪೋಲು ಮಾಡಿದರೆ 5 ಸಾವಿರ ದಂಡ!

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಬರದ ಕರಾಳ ಛಾಯೆ ಆವರಿಸತೊಡಗಿದೆ. ಬಿತ್ತಿದ ಬೀಜಗಳು ಮೊಳಕೆಯೊಡೆಯದೆ ಒಣಗುತ್ತಿದ್ದು, ರೈತರು ಮಳೆಗಾಗಿ ದಿನದಿನವೂ ಪ್ರಾರ್ಥಿಸುತ್ತಿದ್ದರೂ ವರುಣದೇವ ಮಾತ್ರ ಕರುಣೆ ತೋರುತ್ತಿಲ್ಲ. ಜಲಾಶಯಗಳು ಹಾಗೂ ಕೆರೆ-ಕಟ್ಟೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿರುವುದರಿಂದ ಅನ್ನದಾತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಇಡೀ ಕೃಷಿ ವಲಯ ದಿಕ್ಕುತೋಚದಂತಾಗಿದ್ದು, ಈ ಗಂಭೀರ ಪರಿಸ್ಥಿತಿಯನ್ನು (Water Crisis) ಮನಗಂಡಿರುವ (Big News) ರಾಜ್ಯ ರಾಜಧಾನಿ ಬೆಂಗಳೂರಿನ ಜಲಮಂಡಳಿ (BWSSB) ಈಗ ಅತ್ಯಂತ ಪ್ರಮುಖ ಹಾಗೂ ಕಠಿಣ ಆದೇಶವೊಂದನ್ನು ಹೊರಡಿಸಿದೆ.

5 ಸಾವಿರ ದಂಡ ವಿಧಿಸಲಿದೆ ಜಲಮಂಡಳಿ
ನಗರದಲ್ಲಿ ಹನಿ ನೀರು ಕೂಡ ಪೋಲಾಗಬಾರದು ಎಂಬ ಉದ್ದೇಶದಿಂದ ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳಾ ಅವರು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಇನ್ಮುಂದೆ ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ದುರ್ಬಳಕೆ ಮಾಡುವುದಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಒಂದು ವೇಳೆ ಯಾರಾದರೂ ಕುಡಿಯುವ ನೀರಿನಲ್ಲಿ ವಾಹನಗಳನ್ನು ತೊಳೆದರೆ ಅವರಿಗೆ ಬರೋಬ್ಬರಿ 5 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲು ಜಲಮಂಡಳಿ ನಿರ್ಧರಿಸಿದೆ. ಕೇವಲ ವಾಹನ ತೊಳೆಯುವುದು ಮಾತ್ರವಲ್ಲದೆ, ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಮತ್ತು ಈಜುಕೊಳಗಳಿಗೆ (Swimming Pools) ಕುಡಿಯುವ ನೀರನ್ನು ಬಳಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಮುಂಗಾರು ಮಳೆ ಆರಂಭವಾಗಿ ಈಗಾಗಲೇ ಒಂದು ತಿಂಗಳು ಕಳೆದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜೂನ್ ತಿಂಗಳಿನಲ್ಲಿ ಶೇಕಡಾ 29 ರಷ್ಟು ಮಳೆ ಕೊರತೆಯಾಗಿದೆ. ಅಲ್ಪಸ್ವಲ್ಪ ಬಿದ್ದ ಮಳೆಯನ್ನೇ ನಂಬಿ ಸೋಯಾಬಿನ್, ಹೆಸರು, ಉದ್ದು, ಕಬ್ಬು ಹಾಗೂ ಭತ್ತದ ಬಿತ್ತನೆ ಕಾರ್ಯ ಮುಗಿಸಿದ್ದ ರೈತರು, ಈಗ ಮಳೆಯಿಲ್ಲದೆ ಬೆಳೆ ಕೈಗೆ ಸಿಗುತ್ತದೋ ಇಲ್ಲವೋ ಎಂಬ ಕಂಗಾಲಿನಲ್ಲಿದ್ದಾರೆ.

ಕೆಲ ಜಿಲ್ಲೆಗಳಲ್ಲಿ ಮಳೆಯ ಆಶಾಕಿರಣ
ಆದರೆ, ಈ ಬರದ ಭೀತಿಯ ನಡುವೆಯೂ ರಾಜ್ಯದ ಕೆಲವು ಭಾಗಗಳಲ್ಲಿ ವರುಣದೇವ ಸಣ್ಣದೊಂದು ಆಶಾಕಿರಣ ಮೂಡಿಸಿದ್ದಾನೆ. ಬೆಳಗಾವಿ, ಹುಬ್ಬಳ್ಳಿ ಹಾಗೂ ಹಾಸನದ ಮಲೆನಾಡು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿರುವುದರಿಂದ ಸ್ಥಳೀಯ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇದರೊಂದಿಗೆ ಕರಾವಳಿ ಭಾಗದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಂಕಷ್ಟದಲ್ಲಿರುವ ರಾಜ್ಯದ ಅನ್ನದಾತರು ಸದ್ಯದಲ್ಲೇ ಕರಾವಳಿಯಂತೆ ತಮ್ಮ ಭಾಗದಲ್ಲೂ ಉತ್ತಮ ಮಳೆಯಾಗಲಿ ಎಂದು ಆಕಾಶದ ಕಡೆ ಮುಖ ಮಾಡಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಕರ್ತವ್ಯದ ಹಾದಿಯಲ್ಲೇ ಮುಗಿದ ಬಿಎಲ್‌ಒ ಪಯಣ, ಅಪಘಾತಕ್ಕೆ ತುತ್ತಾದ ಸಿಬ್ಬಂದಿ ಸಾ*ವು!

ಹೆಚ್ಚಿನ ಸುದ್ದಿ

Change Language »
error: Content is protected !!