ಡೆಹ್ರಾಡೂನ್ : 2026ರ ಚಾರ್‌ಧಾಮ್ ಯಾತ್ರೆಗೆ ಮುನ್ನ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಬದರಿನಾಥ (Badrinath) ಮತ್ತು ಕೇದಾರನಾಥ (Kedarnath) ಸೇರಿದಂತೆ ಒಟ್ಟು 47 ದೇವಾಲಯಗಳಿಗೆ (temple) ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಲಾಗಿದೆ.
ಈ ದೇವಾಲಯಗಳು ಬದರಿನಾಥ ಮತ್ತು ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ವ್ಯಾಪ್ತಿಗೆ ಸೇರಿವೆ. ಡೆಹ್ರಾಡೂನ್‌ನಲ್ಲಿರುವ ಸಮಿತಿಯ ಶಿಬಿರ ಕಚೇರಿಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಸಮಿತಿ ಅಧ್ಯಕ್ಷರು, ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿರ್ಬಂಧಿಸುವ ಬೇಡಿಕೆ ಬಹಳ ವರ್ಷಗಳಿಂದಲೇ ಇದ್ದುದಾಗಿ ತಿಳಿಸಿದ್ದಾರೆ.
ಸನಾತನ ಧರ್ಮವನ್ನು ಅನುಸರಿಸುವವರು ಹಾಗೂ ಬಾಬಾ ಕೇದಾರನಾಥ ಮತ್ತು ಬದರಿ ವಿಶಾಲ್ ಮೇಲೆ ಭಕ್ತಿ ಹೊಂದಿರುವವರನ್ನು ಮಾತ್ರ ದೇವಾಲಯಗಳಲ್ಲಿ ಸ್ವಾಗತಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. 47 ದೇವಾಲಯಗಳ ಗರ್ಭಗುಡಿ ಹಾಗೂ ಆವರಣಗಳಿಗೆ ಹಿಂದೂಯೇತರರ ಪ್ರವೇಶವನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಯಾತ್ರೆಗೆ ನೋಂದಣಿ ಆರಂಭ
ಇನ್ನೊಂದೆಡೆ ಉತ್ತರಾಖಂಡ ಸರ್ಕಾರವು 2026ರ ಛಾರ್ ಧಾಮ್ ಯಾತ್ರೆಗೆ ಆನ್‌ಲೈನ್ ನೋಂದಣಿ ಪೋರ್ಟಲ್ ಆರಂಭಿಸಿದೆ. ಹಿಮಾಲಯ ಪ್ರದೇಶದಲ್ಲಿ ನಡೆಯುವ ಈ ವಾರ್ಷಿಕ ಯಾತ್ರೆಗೆ ಭಾಗವಹಿಸುವ ಭಕ್ತರು ಕಡ್ಡಾಯವಾಗಿ ಡಿಜಿಟಲ್ ನೋಂದಣಿ ಮಾಡಿಕೊಳ್ಳಬೇಕಾಗಿದೆ.
ಪ್ರತಿ ವರ್ಷ ಲಕ್ಷಾಂತರ ಯಾತ್ರಾರ್ಥಿಗಳು ದೇವಾಲಯಗಳಿಗೆ ಭೇಟಿ ನೀಡುವುದರಿಂದ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಈ ಕಡ್ಡಾಯ ನೋಂದಣಿ ವ್ಯವಸ್ಥೆ ಜಾರಿಗೆ ತರಲಾಗಿದೆ.
ಈ ವರ್ಷದ ಚಾರ್‌ಧಾಮ್ ಯಾತ್ರೆ ಏಪ್ರಿಲ್ 19ರಂದು ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳ ದ್ವಾರ ತೆರೆಯುವುದರೊಂದಿಗೆ ಆರಂಭವಾಗಲಿದೆ. ನಂತರ ಏಪ್ರಿಲ್ 22ರಂದು ಕೇದಾರ್‌ನಾಥ್ ಮತ್ತು ಏಪ್ರಿಲ್ 23ರಂದು ಬದರಿನಾಥ್ ದೇವಾಲಯಗಳು ಭಕ್ತರಿಗೆ ತೆರೆಯಲಿವೆ.