ಡೆಹ್ರಾಡೂನ್: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬದರಿನಾಥ ದೇವಸ್ಥಾನಕ್ಕೆ (Badrinath Temple) ಭಕ್ತರು ಸಮರ್ಪಿಸುವ ದೇಣಿಗೆ ಮತ್ತು ಕಾಣಿಕೆಗಳ ನಿರ್ವಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ (Donation Scam) ಎಂಬ ದೂರು ಕೇಳಿಬಂದಿದೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮೂವರು ಸದಸ್ಯರ ತನಿಖಾ ಸಮಿತಿ ರಚನೆ
ಸಿಎಂ ನಿರ್ದೇಶನದ ಮೇರೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬಿಯಾಲ್ ಅವರು ಮೂವರು ಸದಸ್ಯರ ಹೈಕೋರ್ಟ್ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದಾರೆ. ಗರ್ವಾಲ್ ಕಮಿಷನರ್ ಆನಂದ್ ಸ್ವರೂಪ್ ನೇತೃತ್ವದ ಈ ವಿಶೇಷ ತಂಡವು ಮುಂದಿನ 15 ದಿನಗಳಲ್ಲಿ ಇಡೀ ಹಗರಣದ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಬೇಕಿದೆ.
ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ತಡೆಯಲು, ದೇವಸ್ಥಾನದ ಭದ್ರತೆ ಮತ್ತು ಕಾಣಿಕೆ ಎಣಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ವ್ಯವಸ್ಥಿತಗೊಳಿಸಲು ಕೈಗೊಳ್ಳಬೇಕಾದ ಸುಧಾರಣೆಗಳ ಬಗ್ಗೆಯೂ ಈ ಸಮಿತಿ ಸರ್ಕಾರಕ್ಕೆ ಮಹತ್ವದ ಸಲಹೆಗಳನ್ನು ನೀಡಲಿದೆ. ಮತ್ತೊಂದೆಡೆ, ಅಕ್ರಮದ ಆರೋಪದ ತೂಗುಗತ್ತಿ ಮುನ್ನೆಲೆಗೆ ಬರುತ್ತಿದ್ದಂತೆ ಬದರಿನಾಥ-ಕೇದರಿನಾಥ ದೇವಸ್ಥಾನ ಮಂಡಳಿಯ (BKTC) ಖಾಸಗಿ ಕಾರ್ಯದರ್ಶಿಯಾಗಿದ್ದ ಪ್ರಮೋದ್ ನೌಟಿಯಾಲ್ ಎಂಬ ಅಧಿಕಾರಿಯನ್ನು ಸೇವೆಯಿಂದ ತಕ್ಷಣವೇ ಅಮಾನತುಗೊಳಿಸಲಾಗಿದೆ. ಇವರ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರದಂತೆ ತಡೆಯಲು ಜೋಶಿಮಠದ ಕಚೇರಿಗೆ ವರ್ಗಾಯಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಬದರಿನಾಥ ಧಾಮದಲ್ಲಿ ಭಕ್ತರು ಹುಂಡಿಗೆ ಹಾಕಿದ ಹಣ ಮತ್ತು ಒಡವೆಗಳನ್ನು ಎಣಿಕೆ ಮಾಡುವಾಗ ಅಲ್ಲಿನ ಸಿಬ್ಬಂದಿಯೇ ಕೈಚಳಕ ಪ್ರದರ್ಶಿಸುತ್ತಿದ್ದಾರೆ ಎಂಬ ವಿಡಿಯೋಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದವು. ಈ ದೃಶ್ಯಗಳನ್ನು ಕಂಡು ಆಕ್ರೋಶಗೊಂಡ ‘ಭೈರವ್ ಸೇನಾ’ ಎಂಬ ಸಂಘಟನೆಯು ತಕ್ಷಣವೇ ದೇವಸ್ಥಾನ ಮಂಡಳಿಗೆ ದೂರು ನೀಡಿ, ತಪ್ಪಿತಸ್ಥರನ್ನು ಜೈಲಿಗಟ್ಟುವಂತೆ ಒತ್ತಾಯಿಸಿದೆ. ದೂರು ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ದೇವಸ್ಥಾನದ ಹಿರಿಯ ಅಧಿಕಾರಿಗಳು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದ್ದರು.
ಈ ಆರಂಭಿಕ ತನಿಖೆಯಲ್ಲೇ ಅಧಿಕಾರಿ ಪ್ರಮೋದ್ ನೌಟಿಯಾಲ್ ಮೇಲಿನ ಭ್ರಷ್ಟಾಚಾರದ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ಸಾಬೀತಾಗಿದ್ದರಿಂದ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ಅಕ್ರಮದ ಸಾಕ್ಷ್ಯ ನಾಶಪಡಿಸಲು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾಗಳನ್ನು ಬದಲಾಯಿಸಲಾಗಿದೆ ಎಂಬ ಹೊಸ ಅನುಮಾನಗಳು ಸಾರ್ವಜನಿಕರಲ್ಲಿ ಮೂಡಿದ್ದವು. ಆದರೆ ಈ ಸಂಶಯಗಳಿಗೆ ತೆರೆ ಎಳೆದಿರುವ ದೇವಸ್ಥಾನ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO), ಸಿಸಿಟಿವಿ ಕ್ಯಾಮೆರಾ ಬದಲಾವಣೆ ಮಾಡುವುದು ಕೇವಲ ವಾಡಿಕೆಯ ಪ್ರಕ್ರಿಯೆಯಾಗಿದೆ. ಹಳೆಯ ಡಿವಿಆರ್‌ನಲ್ಲಿದ್ದ ಎಲ್ಲಾ ದೃಶ್ಯಾವಳಿಗಳ ಸಂಪೂರ್ಣ ರೆಕಾರ್ಡ್ ನಮ್ಮ ಬಳಿ ಸುರಕ್ಷಿತವಾಗಿದ್ದು, ಅದನ್ನು ತನಿಖಾ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ನಿನ್ನ ಜೀವನ, ನಿನ್ನಿಷ್ಟ – ಮದುವೆ ಮುರಿದು ಬಂದ ಯುವತಿಗೆ ಕೋರ್ಟ್ ಅಭಯ!