ಆಂಧ್ರಪ್ರದೇಶ : ಚಿತ್ತೂರು ಜಿಲ್ಲೆಯ ಪಲಮನೇರ್‌ನಲ್ಲಿರುವ ಕೌಂಡಿನ್ಯ ಆನೆ (Big News) ಅಭಯಾರಣ್ಯ ಈಗ ದೇಶದಲ್ಲೇ ಮೊದಲ ಬಾರಿಗೆ ವಿಶೇಷ ವೈಜ್ಞಾನಿಕ ಪ್ರಯೋಗವೊಂದಕ್ಕೆ ಸಾಕ್ಷಿಯಾಗಿದೆ. ಕಾಡಾನೆಗಳ ಹಾವಳಿ ತಡೆಯಲು ಬಳಕೆಯಾಗುವ ‘ಕುಮ್ಕಿ’ ಆನೆಗಳಿಗೆ ಅರಣ್ಯ ಇಲಾಖೆಯು ಡಿಎನ್‌ಎ ಪ್ರೊಫೈಲಿಂಗ್ (DNA Profiling) ನಡೆಸಲು ಮುಂದಾಗಿದೆ. ಇದು ಮನುಷ್ಯರಿಗೆ ಇರುವ ಆಧಾರ್ ಕಾರ್ಡ್‌ನಂತೆಯೇ ಆನೆಗಳಿಗೂ ಒಂದು ವಿಶಿಷ್ಟ ಗುರುತಿನ ಚೀಟಿ ನೀಡುವ ಮಹತ್ವದ ಯೋಜನೆಯಾಗಿದೆ.
ಕರ್ನಾಟಕದಿಂದ ಬಂದ ಆನೆಗಳಿಗೆ ಹೈಟೆಕ್ ಸ್ಪರ್ಶ ಸದ್ಯ ಪಲಮನೇರ್ ಕ್ಯಾಂಪ್‌ನಲ್ಲಿ ಜಯಂತ, ರಂಜನ್, ಅಭಿಮನ್ಯು, ಕೃಷ್ಣ, ದೇವ ಮತ್ತು ವಿನಯ್ ಎಂಬ ಆರು ತರಬೇತಿ ಪಡೆದ ಕುಮ್ಕಿ ಆನೆಗಳಿವೆ. ಇವುಗಳನ್ನು ಕರ್ನಾಟಕದಿಂದ ಕರೆತರಲಾಗಿದ್ದು, ಕಾಡಾನೆಗಳನ್ನು ನಿಯಂತ್ರಿಸಲು ಇವು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿವೆ. ಈ ಆನೆಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡೆಹ್ರಾಡೂನ್‌ನಲ್ಲಿರುವ ‘ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ಗೆ ಕಳುಹಿಸಲಾಗಿದೆ. ಅಲ್ಲಿ ಇವುಗಳ ವಂಶವಾಹಿ ವಿಶ್ಲೇಷಣೆ ನಡೆಯಲಿದೆ.
ಏನಿದು ಆನೆಗಳ ‘ಆಧಾರ್’ ಕಾರ್ಡ್?
ಡಿಎನ್‌ಎ ಪರೀಕ್ಷೆಯ ವರದಿ ಬಂದ ನಂತರ, ಪ್ರತಿಯೊಂದು ಆನೆಗೂ ಒಂದು ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತದೆ. ಈ ಕಾರ್ಡ್‌ನಲ್ಲಿ ಆನೆಯ ಡಿಎನ್‌ಎ ಪ್ರೊಫೈಲ್ ಮಾತ್ರವಲ್ಲದೆ, ಅದರ ಆರೋಗ್ಯದ ಇತಿಹಾಸ, ತುತ್ತಾಗಬಹುದಾದ ಕಾಯಿಲೆಗಳು ಮತ್ತು ದೈಹಿಕ ಬೆಳವಣಿಗೆಯ ಸಂಪೂರ್ಣ ಮಾಹಿತಿ ಇರುತ್ತದೆ. ಇದರಿಂದ ಆನೆಗಳಿಗೆ ಯಾವುದಾದರೂ ಅನುವಂಶಿಕ ಕಾಯಿಲೆಗಳಿದ್ದರೆ ಮುಂಚಿತವಾಗಿಯೇ ಪತ್ತೆಹಚ್ಚಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಸುಲಭವಾಗುತ್ತದೆ.
ಸಂಘರ್ಷ ತಡೆಗೆ ವೈಜ್ಞಾನಿಕ ಅಸ್ತ್ರ ಪಲಮನೇರ್‌ನಂತಹ ಪ್ರದೇಶಗಳಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಕುಮ್ಕಿ ಆನೆಗಳ ಪಾತ್ರ ಬಹಳ ದೊಡ್ಡದು. ಈ ಆನೆಗಳ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ನಿಖರವಾದ ವೈಜ್ಞಾನಿಕ ಮಾಹಿತಿ ಇದ್ದರೆ, ಕಾರ್ಯಾಚರಣೆಯ ಸಮಯದಲ್ಲಿ ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಬರಿ ಅವಲೋಕನದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಬದಲು, ಜೈವಿಕ ದತ್ತಾಂಶದ ಆಧಾರದ ಮೇಲೆ ಆನೆಗಳ ನಿರ್ವಹಣೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಮಾದರಿ ಆಗಬಲ್ಲ ಪ್ರಯೋಗ
ದೇಶಕ್ಕೆ ಮಾದರಿಯಾಗಬಲ್ಲ ಪ್ರಯೋಗ ಸಾಂಪ್ರದಾಯಿಕ ವಿಧಾನಗಳ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಈ ಮಾದರಿಯು ದೇಶದ ಇತರ ಆನೆ ಮೀಸಲು ಪ್ರದೇಶಗಳಿಗೂ ಮಾದರಿಯಾಗುವ ಸಾಧ್ಯತೆಯಿದೆ. ತಂತ್ರಜ್ಞಾನ ಮತ್ತು ಪರಿಸರ ಜ್ಞಾನ ಒಂದಾದಾಗ ವನ್ಯಜೀವಿ ಸಂರಕ್ಷಣೆ ಇನ್ನಷ್ಟು ಸುಲಭವೂ ಮತ್ತು ಸುರಕ್ಷಿತವೂ ಆಗಲಿದೆ ಎಂಬುದು ಅರಣ್ಯ ಅಧಿಕಾರಿಗಳ ಆಶಯ.
ಇದನ್ನೂ ಓದಿ: ಮದವೇರಿದ ಆನೆಯ ಅಟ್ಟಹಾಸ; ಲಾರಿ ಚಾಲಕ ಸಾ*ವು, ಮಾವುತನಿಗೆ ಗಂಭೀರಗಾಯ-VIDEO