ಮೆಲ್ಬೋರ್ನ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಅವರಿಗೆ ಫೇಸ್‌ಬುಕ್ ಮೂಲಕ ಕೊಲೆ ಬೆದರಿಕೆ ಸಂದೇಶ ಬಂದಿದ್ದು, ಆಸ್ಟ್ರೇಲಿಯಾ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ ಹಾಗೂ ಈ ಕುರಿತು ತನಿಖೆ ಆರಂಭಿಸಿದ್ದಾರೆ.
ಲ್ಬೋರ್ನ್‌ನ ಮಾರ್ವೆಲ್ ಸ್ಟೇಡಿಯಂನಲ್ಲಿ ಇದೇ ಜುಲೈ 9 ರಂದು ಆಯೋಜಿಸಲಾಗಿರುವ “ಮೆಲ್ಬೋರ್ನ್ ಮೀಟ್ಸ್ ಮೋದಿ (Melbourne Meets Modi) ಬೃಹತ್ ಕಾರ್ಯಕ್ರಮದ ಪ್ರಚಾರದ ಫೇಸ್‌ಬುಕ್ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಈ ಬೆದರಿಕೆ ಹಾಕಲಾಗಿದೆ ಎಂದು ‘ದಿ ಆಸ್ಟ್ರೇಲಿಯಾ ಟುಡೇ’ ವರದಿ ಮಾಡಿದೆ.
ಛಾವಣಿ ಮುಚ್ಚದಿದ್ದರೆ ಸಾವು ನಿಶ್ಚಿತ- ಫೇಸ್‌ಬುಕ್‌ನಲ್ಲಿ ಬೆದರಿಕೆ
ಅಬು ಮುಸ್ತಫಾ (Abu Mustafa) ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಈ ಬೆದರಿಕೆ ಕಾಮೆಂಟ್ ಬಂದಿದೆ. ಅದರಲ್ಲಿ, ಕಾರ್ಯಕ್ರಮ ನಡೆಯುವಾಗ ಕ್ರೀಡಾಂಗಣದ ಮೇಲ್ಛಾವಣಿಯನ್ನು (Roof top) ಮುಚ್ಚಿಡುವುದು ಒಳಿತು, ಇಲ್ಲದಿದ್ದರೆ ಅವರು (ಪ್ರಧಾನಿ ಮೋದಿ) ಆಸ್ಟ್ರೇಲಿಯಾಕ್ಕೆ ಬರುತ್ತಿರುವುದು ತಮ್ಮ ಸಾವಿಗಾಗಿಯೇ ಎಂದು ಬರೆಯಲಾಗಿದೆ. ಪ್ರವಾಸದ ಹೊತ್ತಿನಲ್ಲೇ ಇಂತಹ ಸಂದೇಶ ಬಂದಿರುವುದು ಆಸ್ಟ್ರೇಲಿಯಾ ಮತ್ತು ಭಾರತೀಯ ಭದ್ರತಾ ಏಜೆನ್ಸಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಐಪಿ ಅಡ್ರೆಸ್ ಪತ್ತೆ
ತನಿಖೆ ನಡೆಸುತ್ತಿರುವ ಆಸ್ಟ್ರೇಲಿಯಾದ ತನಿಖಾಧಿಕಾರಿಗಳು ಈಗಾಗಲೇ ಈ ಬೆದರಿಕೆ ಸಂದೇಶ ಹಾಕಲಾದ ಫೇಸ್‌ಬುಕ್ ಖಾತೆಯ ಐಪಿ (IP) ವಿಳಾಸವನ್ನು ಪತ್ತೆಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಬಂಧನವಾಗಿದೆಯೇ ಎಂಬ ಬಗ್ಗೆ ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ (AFP) ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಪ್ರಧಾನಿ ಭದ್ರತೆಯ ದೃಷ್ಟಿಯಿಂದ ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪ್ರಧಾನಿ ಮೋದಿಯವರ ಪ್ರವಾಸದ ಅವಧಿಯಲ್ಲಿ ಬಿಗಿ ಭದ್ರತೆ ಖಾತ್ರಿಪಡಿಸಲು ಆಸ್ಟ್ರೇಲಿಯಾದ ಹಲವು ಪ್ರಮುಖ ಭದ್ರತಾ ಏಜೆನ್ಸಿಗಳು ಕಾರ್ಯಾಚರಣೆಗೆ ಇಳಿದಿವೆ.
ಜು.8-10ರವರೆಗೆ ಮೋದಿ ಆಸ್ಟ್ರೇಲಿಯಾ ಪ್ರವಾಸ
ಮೋದಿ ಅವರು ಜು.8 ರಿಂದ 10ರವರೆಗೆ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ವಾರ್ಷಿಕ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು 3 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಹಾಗೂ ಮೆಲ್ಬೋರ್ನ್ ಕಾರ್ಯಕ್ರಮ ಸೇರಿದಂತೆ ಹಲವು ಸಂವಾದಗಳಲ್ಲಿ ಭಾಗಿಯಾಗಲಿದ್ದಾರೆ.
ಭಾರತ ನಮಗೆ ನಿರ್ಣಾಯಕ ಆರ್ಥಿಕ ಪಾಲುದಾರ
ಶೃಂಗಸಭೆಯ ಕುರಿತು ಪ್ರಕಟಣೆ ಹೊರಡಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, ಭಾರತವನ್ನು ಆಸ್ಟ್ರೇಲಿಯಾದ ಪ್ರಮುಖ ಕಾರ್ಯತಂತ್ರ ಮತ್ತು ಆರ್ಥಿಕ ಪಾಲುದಾರ ಎಂದು ಬಣ್ಣಿಸಿದ್ದಾರೆ. ವಿಶ್ವದ ನಾಲ್ಕನೇ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವ ಭಾರತವು ಆಸ್ಟ್ರೇಲಿಯಾಕ್ಕೆ ನಿರ್ಣಾಯಕ ಆರ್ಥಿಕ ಪಾಲುದಾರ ದೇಶವಾಗಿದೆ. ನಮ್ಮ ವಾರ್ಷಿಕ ನಾಯಕರ ಶೃಂಗಸಭೆಗಾಗಿ ನನ್ನ ಆಪ್ತ ಮಿತ್ರರಾದ ಮೋದಿಯವರನ್ನು ಆಸ್ಟ್ರೇಲಿಯಾಕ್ಕೆ ಸ್ವಾಗತಿಸಲು ನಾನು ಹೆಮ್ಮೆಪಡುತ್ತೇನೆ ಎಂದು ಅವರು ಹೇಳಿದ್ದಾರೆ.