ಬೆಂಗಳೂರು : ದುಬೈದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನವನ್ನು ಅಕ್ರಮವಾಗಿ ಕಳ್ಳ ಸಾಗಣೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ವಜಾಗೊಳಿಸಿ ಇಂದು ಆದೇಶ ಪ್ರಕಟಿಸಿದೆ.
ವಿಶೇಷ ನ್ಯಾ.ವಿಶ್ವನಾಥ್ ಗೌಡರ್ ಅವರು ಈ ಆದೇಶ ಪ್ರಕಟಿಸಿದ್ದಾರೆ. ರನ್ಯಾ ರಾವ್ ವಿರುದ್ಧ ಇದೇ ಪ್ರಕರಣದಲ್ಲಿ DRI (ಕಂದಾಯ ಗುಪ್ತಚರ ನಿರ್ದೇಶನಾಲಯ) ಸಂಸ್ಥೆ, ಸಿಬಿಐ ತನಿಖೆಗೆ ಎಂಟ್ರಿ ಬಳಿಕ ಇ.ಡಿ. (ಜಾರಿ ನಿರ್ದೇಶನಾಲಯ) ತನಿಖೆಗೆ ಇಳಿದಿದೆ.
ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 102 ಅನ್ನು DRI ಅಧಿಕಾರಿಗಳು ಪಾಲಿಸಿಲ್ಲ. ಬಂಧನ ಮೆಮೊವನ್ನ ನೀಡಿಲಾಗಿಲ್ಲ. ನಮ್ಮ ಕಕ್ಷಿದಾರರನ್ನು ನಿದ್ದೆ ಮಾಡಲು ಅವಕಾಶ ನೀಡದೇ ಅವರ ಹೇಳಿಕೆ ದಾಖಲಿಸಿಕೊಂಡಿರುವುದು ಸ್ವಯಂ ಹೇಳಿಕೆಯಾಗಲ್ಲ ಎಂದು ರನ್ಯಾ ಪರ ಹಿರಿಯ ವಕೀಲ ಕಿರಣ್ ಜವಳಿ ವಾದಿಸಿದ್ದರು. ಅಲ್ಲದೇ ರಿಮ್ಯಾಂಡ್ ಅರ್ಜಿಯಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಆದರೆ, ಉಳಿದ ಇಬ್ಬರ ಬಗ್ಗೆ ಯಾವ ಮಾಹಿತಿ ನೀಡಿಲ್ಲವೆಂದು ಈ ಹಿಂದಿನ ವಿಚಾರಣೆ ವೇಳೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಕಸ್ಟಮ್ಸ್ ಕಾಯ್ದೆಗೆ ಅನುಗುಣವಾಗಿ ರನ್ಯಾರನ್ನು ಅರೆಸ್ಟ್ ಮಾಡಲಾಗಿದೆ. ಹಾಗೊಮ್ಮೆ ಕಾಯ್ದೆಯನ್ನು ಪಾಲಿಸದಿದ್ದರೂ ಮೇಲ್ನೋಟಕ್ಕೆ ಆರೋಪವಿದ್ದಾಗ ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಚಿನ್ನ ಕಳ್ಳ ಸಾಗಣೆಯಲ್ಲಿ ದೊಡ್ಡ ಜಾಲವಿದ್ದು, ಅದನ್ನು ಭೇದಿಸಬೇಕಿದೆ ಎಂದು ಪ್ರಾಸಿಕ್ಯೂಷನ್ ಪರ ಹಿರಿಯ ಸ್ಥಾಯಿ ವಕೀಲ ಮಧು ಎನ್.ರಾವ್ ಅವರು ಪ್ರತಿವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ಇಂದಿಗೆ (ಮಾ.14) ಜಾಮೀನು ಆದೇಶ ಕಾಯ್ದಿರಿಸಿತ್ತು.
ಪ್ರಕರಣದ ಹಿನ್ನೆಲೆ :
ಕಳೆದ ಮಾ.3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಗೋಲ್ಡ್ ಸ್ಮಗ್ಲಿಂಗ್ ಆರೋಪದಡಿ ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು, ಅವರಿಂದ ರೂ.12.86 ಕೋಟಿ ಮೌಲ್ಯದ 14.2 Kg ಚಿನ್ನವನ್ನು ಸೀಜ್ ಮಾಡಿದ್ದರು. ಕಸ್ಟಮ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ರನ್ಯಾ ಚಿನ್ನವನ್ನು ಬೆಲ್ಟ್ & ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎಂಬ ಆರೋಪವಿದೆ.
ಇದರೊಂದಿಗೆ ಡಿಜಿಪಿ ಶ್ರೇಣಿ ಅಧಿಕಾರಿಯ ಸಾಕು ಮಗಳೂ ಆಗಿರುವ ರನ್ಯಾ, VIP ವ್ಯಕ್ತಿಗಳಿಗೆ ಇರುವ ಮಾರ್ಗದ ಮೂಲಕ ಏರ್ಪೋರ್ಟ್ದಿಂದ ಸುಲಭವಾಗಿ ಹೊರೆಗೆ ಬರುತ್ತಿದ್ದರು ಎಂಬ ಆಪಾದನೆಯೂ ಇದೆ. ಇನ್ನು ಡಿಆರ್‌ಐ ಅಧಿಕಾರಿಗಳು ರೂ.2.06 ಕೋಟಿ ಮೌಲ್ಯದ ಆಭರಣ ಮತ್ತು ರೂ.2.67 ಕೋಟಿ ಹಣವನ್ನು ನಗದು ಜಪ್ತಿಯೂ ಮಾಡಿಕೊಂಡಿದ್ದರು. ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಕೆಲ ರಾಜಕಾರಣಿಗಳ (ಇಬ್ಬರ ಸಚಿವರ) ಬೆಂಬಲವಿದ ಎಂದೂ ವಿಪಕ್ಷ ನಾಯಕರು ಆರೋಪವನ್ನು ಮಾಡುತ್ತಿರುವುದು ಗೊತ್ತೇ ಇದೆ.