ಬೀದರ್ ಜಿಲ್ಲೆಯ (Bidar) ಹುಮನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಅನುಮಾನಾಸ್ಪದ ವಸ್ತು ಸ್ಪೋಟಗೊಂಡು (Explosion) ಆರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಸ್ಪೋಟ ಸಂಭವಿಸಿದ್ದು, ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹುಮನಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಪೋಟಗೊಂಡ ವಸ್ತುವಿನ ಮಾದರಿಗಳನ್ನು ಸಂಗ್ರಹಿಸಲು ಸೋಕೋ (SOCO) ತಂಡವನ್ನು ಕರೆಸಲಾಗಿದ್ದು, ತಾಂತ್ರಿಕ ತನಿಖೆ ಆರಂಭವಾಗಿದೆ.
ಕಳೆದ ಆರು ತಿಂಗಳಲ್ಲಿ ಇದೇ ಗ್ರಾಮದಲ್ಲಿ ಐದು ಬಾರಿ ಸ್ಪೋಟ ಸಂಭವಿಸಿರುವುದು ಸ್ಥಳೀಯರಲ್ಲಿ ಭೀತಿಯನ್ನುಂಟುಮಾಡಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಕೂಡ ಘಟನಾ ಸ್ಥಳಕ್ಕೆ ತೆರಳುತ್ತಿದ್ದಾರೆ.
ಗಾಯಾಳುಗಳನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಯೋಗಿ ಬಾಳಿ ಮಾಹಿತಿ ನೀಡಿದ್ದಾರೆ. ಸ್ಫೋಟದಿಂದ ಮಕ್ಕಳ ಕಣ್ಣು, ಕಾಲು, ಮುಖ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಬೀದರ್ ನಲ್ಲಿ ನಿಗೂಢ ಸ್ಫೋಟ#BreakingNews #blast #students #injured #bidar #KannadaNews #navasamajanews pic.twitter.com/qsR4sdp0Vx
— navasamaja (@navasamajanews) January 31, 2026
ಗಾಯಗೊಂಡವರನ್ನು ಜಫರ್‌ಸಾಬ್, ಅಜೀಜ್, ಕುಶರಾ, ಅನ್ವರ್ ಹಾಗೂ ಹರಿಜಾರ್ ಎಂದು ಗುರುತಿಸಲಾಗಿದೆ. ಇವರಲ್ಲಿ ಅನ್ವರ್ ಮತ್ತು ಜಫರ್‌ಸಾಬ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಒಬ್ಬರನ್ನು ಸೊಲ್ಲಾಪುರಕ್ಕೆ ಹಾಗೂ ಮತ್ತೊಬ್ಬರನ್ನು ಹೈದ್ರಾಬಾದ್‌ಗೆ ರವಾನಿಸಲಾಗಿದೆ.
ಇನ್ನು ಉಳಿದ ಗಾಯಾಳುಗಳ ಸ್ಥಿತಿಯೂ ಗಂಭೀರವಾಗಿದ್ದು, ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ಮೂಲ ಮತ್ತು ಕಾರಣ ಪತ್ತೆಗೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಗ್ರಾಮದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.