ಬೆಂಗಳೂರು ದಕ್ಷಿಣ : ಬಿಡದಿ ಟೌನ್‌ಶಿಪ್ (Bidadi Township) ಯೋಜನೆಯ ಪರ-ವಿರೋಧದ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ (Karnataka) ಭಾರಿ ಬಿರುಗಾಳಿ ಎಬ್ಬಿಸಿರುವ ಬೆನ್ನಲ್ಲೇ, ಇದೀಗ ಯೋಜನೆ ಪರವಾಗಿರುವ ಬಿಡದಿಯ ಕೆಲ ರೈತರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ನೇರ ಸವಾಲು ಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ಮೊದಲು ಯೋಜನೆ ಪರವಾಗಿರುವ ರೈತರ ಅಸಲಿ ಸಮಸ್ಯೆಗಳನ್ನು ಆಲಿಸಲಿ ಎಂದು ರೈತರು ಗುಡುಗಿದ್ದಾರೆ.
ಇದಕ್ಕಾಗಿ ಕಿಡಿಕಾರುತ್ತಲೇ ರಾಮನಗರ ತಾಲೂಕಿನ ಭೈರಮಂಗಲ ಗ್ರಾಮದಲ್ಲಿ ಬೃಹತ್ ಮುಕ್ತ ವೇದಿಕೆಯೊಂದನ್ನು ನಿರ್ಮಾಣ ಮಾಡಿರುವ ರೈತರು, ಈ ವೇದಿಕೆಗೆ ಬಂದು ಮುಖಾಮುಖಿ ಚರ್ಚೆ ನಡೆಸುವಂತೆ ಕುಮಾರಸ್ವಾಮಿ ಹಾಗೂ ಸ್ಥಳೀಯ ಶಾಸಕ ಮಂಜುನಾಥ್ ಅವರಿಗೆ ಬಹಿರಂಗ ಸವಾಲು ಹಾಕಿ ಆಹ್ವಾನ ನೀಡಿದ್ದಾರೆ.
ರೆಡ್ ಝೋನ್ ಬಗ್ಗೆ ಮಾತನಾಡಿ ಎಂದ ರೈತರು!
ಈ ಭಾಗದ ರೈತರ ಜಮೀನುಗಳು ಕಳೆದ 20 ವರ್ಷಗಳಿಂದ ‘ರೆಡ್ ಜೋನ್’ (Red Zone) ಸೇರಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗದೆ ರೈತರು ದಶಕಗಳಿಂದ ರೆಡ್ ಜೋನ್ ಭೂತದಿಂದ ವನವಾಸ ಅನುಭವಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಭೂಮಿ ನನೆಗುದಿಗೆ ಬಿದ್ದಿರುವುದರಿಂದ, ಟೌನ್‌ಶಿಪ್ ಯೋಜನೆ ಬಂದರೆ ತಮಗೆ ನ್ಯಾಯಯುತ ಪರಿಹಾರ ಹಾಗೂ ಬದುಕಿಗೆ ಒಂದು ಆಸರೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಭಾಗದ ರೈತರು ಯೋಜನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಹೀಗಿದ್ದೂ ಕುಮಾರಸ್ವಾಮಿ ಅವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ಪ್ರತಿಭಟನಾಕಾರರು, ಕೇಂದ್ರ ಸಚಿವರಾದ ಹೆಚ್‌ಡಿಕೆ ಅವರು ಕೇವಲ ಒಂದು ಕಡೆಯವರ ಮಾತನ್ನಷ್ಟೇ ಕೇಳದೆ ಯೋಜನೆ ಪರವಾಗಿರುವ ರೈತರ ಸಂಕಷ್ಟವನ್ನೂ ಆಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ಭಾಗವಾಗಿ ರೈತರು ಬಿಡದಿ ಹಾಗೂ ಹಾರೋಹಳ್ಳಿ ಮುಖ್ಯ ರಸ್ತೆಯನ್ನು ಸಂಪೂರ್ಣವಾಗಿ ತಡೆದು ಆಕ್ರೋಶ ಹೊರಹಾಕಿದ್ದರಿಂದ ಸ್ಥಳದಲ್ಲಿ ಕೆಲಕಾಲ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು.
ಶೀಘ್ರವಾಗಿ ಇನ್ನುಳಿದ 6 ಕಂದಾಯ ಗ್ರಾಮಗಳ ಅಂತಿಮ ಅಧಿಸೂಚನೆಯನ್ನು (Final Notification) ಹೊರಡಿಸಬೇಕು ಮತ್ತು ಸರ್ಕಾರವು ಕೂಡಲೇ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿ ತಮ್ಮ ಜಮೀನುಗಳ ಮೇಲಿರುವ ರೆಡ್ ಜೋನ್ ಕಂಟಕವನ್ನು ಕಡ್ಡಾಯವಾಗಿ ತೆರವು ಮಾಡಬೇಕು ಎಂದು ರೈತರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಬಡ ರೈತರ ಬದುಕಿನೊಂದಿಗೆ ಆಟವಾಡದಂತೆ ಎಚ್ಚರಿಸಿರುವ ಭೈರಮಂಗಲ ಭಾಗದ ರೈತರು ಸಿದ್ಧಪಡಿಸಿರುವ ಈ ಮುಕ್ತ ವೇದಿಕೆಗೆ ಹೆಚ್‌ಡಿಕೆ ಆಗಮಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.