ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi township) ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ರಾಜಕೀಯ ಸಮರ ತೀವ್ರಗೊಂಡಿದೆ.ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿಗಳ ನಡೆ ಹಾಗೂ ಸುಳ್ಳು ದಾಖಲೆಗಳ ಪ್ರದರ್ಶನದ ಹಿಂದೆ ತೀವ್ರ ಭಯ ಮತ್ತು ಅಪರಾಧಿ ಪ್ರಜ್ಞೆ ಎದ್ದು ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಬಿಡದಿಯಲ್ಲಿ ಜಮೀನು ಕಳೆದುಕೊಳ್ಳುವ ರೈತರ ಪರವಾಗಿ ಮಾತನಾಡುತ್ತಿರುವ ತಮ್ಮನ್ನು ನೋಡಿ ಸಿಎಂ ಅಸೂಯೆ ಪಡುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ನಿಮ್ಮನ್ನು ನೋಡಿ ಅಸೂಯೆ ಪಡಲು ನೀವೇನು ಸಾಧನೆ ಮಾಡಿದ್ದೀರಿ ಎಂದು ಕುಟುಕಿದರು. ಅಲ್ಲದೆ, ಮುಖದಲ್ಲಿ ನಡುಕ ಮತ್ತು ಸೋಲಿನ ಆತಂಕ ಎದ್ದುಕಾಣುತ್ತಿರುವ ಮುಖ್ಯಮಂತ್ರಿಗಳಿಗೆ ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಬಿಡದಿ ಟೌನ್‌ಶಿಪ್ ಕೈಬಿಡಲು ಆಗ್ರಹ, ಜು.17ರಂದು ಪ್ರತಿಭಟನೆಗೆ ಬಿಜೆಪಿ ನಿರ್ಧಾರ
ಈ ವೇಳೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಕಾಂಗ್ರೆಸ್ ಹಾಗೂ ರೈತರ ಆಕ್ರೋಶಕ್ಕೆ ಮನ್ನಣೆ ನೀಡಿ ಬಿಡದಿ ಯೋಜನೆಯನ್ನು ರದ್ದುಗೊಳಿಸಲಾಗಿತ್ತು ಎಂದು ಹೆಚ್‌ಡಿಕೆ ಸ್ಪಷ್ಟಪಡಿಸಿದರು. ಯೋಜನೆ ಬೇಡವೆಂದ ಮೇಲೆ ಅದನ್ನು ಅಧಿಕೃತವಾಗಿ ಕೈಬಿಡಲು ಸರ್ಕಾರಕ್ಕೆ ಏನು ಹಿಂಜರಿಕೆ ಎಂದು ಪ್ರಶ್ನಿಸಿದರು. ಒಂದು ಕಡೆ ರೈತರನ್ನು ಸಮಾಧಾನಪಡಿಸಲು ಸಮಿತಿ ರಚನೆಯ ನಾಟಕವಾಡುತ್ತಾ, ಮತ್ತೊಂದೆಡೆ ಹಿಂಬಾಗಿಲಿನಿಂದ ನಾಲ್ಕು ಗ್ರಾಮಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ಬಯಲು ಮಾಡಿದೆ ಎಂದು ಆರೋಪಿಸಿದ್ದಾರೆ.