ಸಾಕು ನಾಯಿಗಳೆಂದರೆ ಅವುಗಳ ಮಾಲೀಕರಿಗೆ ಪ್ರಾಣಕ್ಕಿಂತ ಹೆಚ್ಚು. ಎಷ್ಟೋ ಮಂದಿ ಶ್ವಾನ ಪ್ರಿಯರು ತಮ್ಮ ಮುದ್ದಿನ ನಾಯಿಗಳನ್ನು ಮಕ್ಕಳಂತೆ ಸಾಕುವುದೂ ಉಂಟು. ಈ ರೀತಿ ಅಕ್ಕರೆಯಿಂದ ಸಾಕಿದ ನಾಯಿಗಳನ್ನು ಕದ್ದೊಯ್ಯುವ ಗುಂಪೊಂದು ನಗರದಲ್ಲಿ ತಲೆಯೆತ್ತಿದೆ.
ಮಾಲೀಕರು ನಾಯಿಗಳನ್ನು ವಾಕಿಂಗ್ ಗಾಗಿ ಹೊರಗಡೆ ಬಿಟ್ಟ ವೇಳೆ ಹೊಂಚು ಹಾಕಿ ಅವುಗಳನ್ನು ಹೊತ್ತೊಯ್ಯುವ ಗುಂಪು ನಗರದಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ.
ಫ್ರೇಜರ್ ಟೌನ್ ನಿವಾಸಿಯಾಗಿರುವ ಸೈಯದ್ ಎಂಬುವವರ ಮುದ್ದಿನ ಶ್ವಾನವನ್ನೂ ಕಳ್ಳರ ಗುಂಪೊಂದು ಹೊತ್ತೊಯ್ದಿದೆ. ಮಾಲೀಕರು ಶ್ವಾನವನ್ನು ಹೊರಗಡೆ ಬಿಟ್ಟಿದ್ದ ವೇಳೆ ಡಿಯೋ ಬೈಕ್ ನಲ್ಲಿ ಬಂದ ಮೂವರು ಕಳ್ಳರು ನಾಯಿಯನ್ನು ಪುಸಲಾಯಿಸಿ ಹೊತ್ತೊಯ್ದಿದ್ದಾರೆ. ಈ ದೃಶ್ಯಾವಳಿಗಳು ಸಮೀಪದ ಸಿಸಿಟಿವಿ ಕೆಮೆರಾದಲ್ಲಿ ದಾಖಲಾಗಿದೆ.
ಈ ಸಿಸಿಟಿವಿ ದೃಶ್ಯವನ್ನು ಬೆಂಗಳೂರಿನ ಪೊಲೀಸ್ ಇಲಾಖೆಯೊಂದಿಗೆ ಟ್ವಿಟ್ಟರ್ ಮೂಲಕ ಹಂಚಿಕೊಂಡಿರುವ ಶ್ವಾನದ ಮಾಲೀಕರು ಕಳ್ಳರನ್ನು ಹಿಡಿದು ತಮ್ಮ ಮುದ್ದಿನ ನಾಯಿ “ಜೋಯಿ” ಯನ್ನು ಹಿಂತಿರುಗಿಸಲು ನೆರವಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಜೊತೆಗೆ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ