Thursday, July 16, 2026
Homeಟಾಪ್ ನ್ಯೂಸ್DONALD TRUMP: ನಮ್ಮಲ್ಲಿ ಬಾಸ್‌ ಯಾರು ಎಂದು ನೆತನ್ಯಾಹುಗೆ ಚೆನ್ನಾಗಿ ಗೊತ್ತು: ಟ್ರಂಪ್ ಟಾಂಗ್

DONALD TRUMP: ನಮ್ಮಲ್ಲಿ ಬಾಸ್‌ ಯಾರು ಎಂದು ನೆತನ್ಯಾಹುಗೆ ಚೆನ್ನಾಗಿ ಗೊತ್ತು: ಟ್ರಂಪ್ ಟಾಂಗ್

ವಾಷಿಂಗ್ಟನ್:‌ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ‌(Benjamin Netanyahu) ಅವರು ಮುಂದಿನ ವಾರವೇ ಅಮೆರಿಕದ (America) ಶ್ವೇತಭವನಕ್ಕೆ (White House) ಭೇಟಿ ನೀಡುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ. ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ಟ್ರಂಪ್, ನಮ್ಮಿಬ್ಬರ ಸಂಬಂಧದಲ್ಲಿ “ಯಾರು ಬಾಸ್ ಎಂಬುದು ನೆತನ್ಯಾಹು ಅವರಿಗೆ ಚೆನ್ನಾಗಿ ಗೊತ್ತು” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಫೆಬ್ರವರಿ ಕೊನೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಆರಂಭಿಸಿರುವ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇಬ್ಬರು ನಾಯಕರ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯಗಳು ಮೂಡಿವೆ ಎಂಬ ವರದಿಗಳ ಬೆನ್ನಲ್ಲೇ ಈ ಭೇಟಿಯ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, “ನಾವಿಬ್ಬರೂ ತುಂಬಾ ಚೆನ್ನಾಗಿದ್ದೇವೆ. ಆದರೆ ಇಲ್ಲಿ ಯಾರು ಬಾಸ್ ಅನ್ನೋದು ಅವರಿಗೆ ಗೊತ್ತು” ಎಂದು ತಮ್ಮದೇ ಶೈಲಿಯಲ್ಲಿ ಹೇಳಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಜುಲೈ 7 ಮತ್ತು 8 ರಂದು ಟ್ರಂಪ್ ಅವರು ನಾಟೋ (NATO) ಶೃಂಗಸಭೆಗಾಗಿ ಟರ್ಕಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಕಾರಣದಿಂದಾಗಿ ಮುಂದಿನ ವಾರವೇ ಈ ಭೇಟಿ ಸಾಧ್ಯವಾಗದಿದ್ದರೆ, ಆ ಮುಂದಿನ ವಾರ ಇಬ್ಬರು ನಾಯಕರು ಮುಖಾಮುಖಿಯಾಗುವ ಸಾಧ್ಯತೆಯಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಫೋನ್ ಮೂಲಕ ಮಾತನಾಡಿದ್ದ ಟ್ರಂಪ್ ಮತ್ತು ನೆತನ್ಯಾಹು, ಶೀಘ್ರದಲ್ಲೇ ಅಮೆರಿಕದಲ್ಲಿ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ.

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸಂಘಟನೆಯೊಂದಿಗೆ ಇಸ್ರೇಲ್ ನಡೆಸುತ್ತಿರುವ ಸಂಘರ್ಷವು ಇರಾನ್ ಜೊತೆಗಿನ ಶಾಂತಿ ಮಾತುಕತೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಟ್ರಂಪ್ ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ನಡೆಯನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು. ಆದಾಗ್ಯೂ, ಇಸ್ರೇಲ್ ಅಮೆರಿಕದ ಆಪ್ತ ಮಿತ್ರ ರಾಷ್ಟ್ರವಾಗಿದ್ದು, ಮುಂಬರುವ ಈ ಉನ್ನತ ಮಟ್ಟದ ಸಭೆಯು ಜಾಗತಿಕ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದಕ್ಕೂ ಮುನ್ನ ಈ ಇಬ್ಬರು ನಾಯಕರು ಕಳೆದ ಫೆಬ್ರವರಿ 11 ರಂದು ವಾಷಿಂಗ್ಟನ್‌ನಲ್ಲಿ ಭೇಟಿಯಾಗಿದ್ದರು.

ಇದನ್ನೂ ಓದಿ : ಸಚಿವರ ಆಯ್ಕೆ ನಂತರ 50ಕ್ಕೂ ಹೆಚ್ಚು ನಿಗಮ-ಮಂಡಳಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ

ಹೆಚ್ಚಿನ ಸುದ್ದಿ

Change Language »
error: Content is protected !!