ನಡುರಸ್ತೆಯಲ್ಲಿ ಬೈಕ್ ವೀಲಿಂಗ್ (Wheeling) ಮಾಡುತ್ತಾ, ತುರ್ತು ಚಿಕಿತ್ಸೆಗೆ ಧಾವಿಸುತ್ತಿದ್ದ ಅಂಬುಲೆನ್ಸ್‌ಗೂ (Ambulance) ದಾರಿ ಬಿಡದೆ ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ (Bengaluru) ಯಶವಂತಪುರ ಸಂಚಾರಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ್ದ ಒಟ್ಟು ಆರು ಜನ ಅಪ್ರಾಪ್ತ ಹುಡುಗರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಏನಿದು ಘಟನೆ.?
ಕಳೆದ ಜುಲೈ 4ರ ಮಧ್ಯರಾತ್ರಿ ಯಶವಂತಪುರ ರಸ್ತೆಯಲ್ಲಿ ಈ ಘೋರ ಘಟನೆ ನಡೆದಿತ್ತು. ಸೈರನ್ ಹಾಕಿಕೊಂಡು ರೋಗಿಯ ಪ್ರಾಣ ಉಳಿಸಲು ವೇಗವಾಗಿ ಹೋಗುತ್ತಿದ್ದ ಅಂಬುಲೆನ್ಸ್ ಮುಂದೆ ಈ ಪುಂಡ ಯುವಕರ ದಂಡು ಬೈಕ್‌ಗಳ ಇಂಜಿನ್ ಸೌಂಡ್ ಮಾಡುತ್ತಾ ವೀಲಿಂಗ್ ಆರಂಭಿಸಿತ್ತು.
ಅಂಬುಲೆನ್ಸ್ ಚಾಲಕ ಎಷ್ಟು ಹಾರ್ನ್ ಮಾಡಿದರೂ ದಾರಿ ಬಿಡದೆ, ಇಡೀ ರಸ್ತೆಯನ್ನು ಬ್ಲಾಕ್ ಮಾಡಿ ತಮ್ಮ ಹುಚ್ಚಾಟ ಮುಂದುವರಿಸಿದ್ದರು. ಈ ಅಮಾನವೀಯ ಕೃತ್ಯದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ನೆಟ್ಟಿಗರು ಪೊಲೀಸರನ್ನು ಒತ್ತಾಯಿಸಿದ್ದರು.
ಸಾಮಾಜಿಕ ಜಾಲತಾಣದ ವಿಡಿಯೋ ಆಧರಿಸಿ ಆಪರೇಷನ್
ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಯಶವಂತಪುರ ಸಂಚಾರಿ ಪೊಲೀಸರು, ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದರು. ಬೈಕ್‌ಗಳ ನಂಬರ್ ಪ್ಲೇಟ್ ಹಾಗೂ ಯುವಕರ ಚಹರೆ ಆಧರಿಸಿ ತನಿಖೆ ಕೈಗೊಂಡು, ವೀಲಿಂಗ್ ಮಾಡಿದ್ದ ಆರು ಜನ ಅಪ್ರಾಪ್ತರನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪುಂಡರ ವಿರುದ್ಧ ಕ್ರಿಮಿನಲ್ ಹಿನ್ನೆಲೆಯಡಿ ಎಫ್‌ಐಆರ್ (FIR) ದಾಖಲಾಗಿದ್ದು, ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಅಪ್ರಾಪ್ತರಿಗೆ ಬೈಕ್ ನೀಡಿದ ಪೋಷಕರಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಯಿದ್ದು, ಮುಂದಿನ ಕಠಿಣ ಕಾನೂನು ಕ್ರಮ ಮುಂದುವರಿದಿದೆ.