Wednesday, August 19, 2026
Homeಕ್ರೀಡೆIPL : ಇಂದು ಓವರ್ ಆಗಿ ಆಡಿದ್ರೆ ಜೈಲೂಟ ಫಿಕ್ಸ್ ಹುಷಾರ್ - ಆರ್‌ಸಿಬಿ ಫ್ಯಾನ್ಸ್...

IPL : ಇಂದು ಓವರ್ ಆಗಿ ಆಡಿದ್ರೆ ಜೈಲೂಟ ಫಿಕ್ಸ್ ಹುಷಾರ್ – ಆರ್‌ಸಿಬಿ ಫ್ಯಾನ್ಸ್ ಗೆ ಪೊಲೀಸ್ ವಾರ್ನಿಂಗ್!-VIDEO

ಬೆಂಗಳೂರು: ದೇಶಾದ್ಯಂತ ಇಂದು (ಮೇ 31) ಐಪಿಎಲ್ ಫೈನಲ್ (IPL) ಪಂದ್ಯದ ಮಹಾ ಜ್ವರ ಆವರಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಸಂಜೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟನ್ಸ್ (Gujarat Titans) ತಂಡಗಳ ನಡುವೆ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ.

ಇತ್ತ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುತ್ತಿದ್ದರೂ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾತ್ರ ಫಲಿತಾಂಶದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಈ ನಿಟ್ಟಿನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿರುವ ಪೊಲೀಸರು, ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

ಕಳೆದ ವರ್ಷದ ಭೀಕರ ದುರಂತಕ್ಕೆ ಪೊಲೀಸರ ಮುನ್ನೆಚ್ಚರಿಕೆ

ಪೊಲೀಸರು ಈ ಬಾರಿ ಇಷ್ಟೊಂದು ಬಿಗಿ ಕ್ರಮ ಕೈಗೊಳ್ಳಲು ಒಂದು ಬಲವಾದ ಕಾರಣವಿದೆ. ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಆ ವೇಳೆ ಇಡೀ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಮತ್ತು ಸಂಭ್ರಮಾಚರಣೆಯ ಸಂದರ್ಭದಲ್ಲಿ ದುರದೃಷ್ಟವಶಾತ್ ಭೀಕರ ದುರಂತವೊಂದು ಸಂಭವಿಸಿ, ಬರೋಬ್ಬರಿ 11 ಮಂದಿ ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು.

ಈ ಕಹಿ ಘಟನೆಯ ನಂತರ ಎಚ್ಚೆತ್ತುಕೊಂಡಿದ್ದ ಪೊಲೀಸರು, ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಯೊಂದು ಐಪಿಎಲ್ ಪಂದ್ಯಕ್ಕೂ ಅತ್ಯಂತ ಬಿಗಿ ಭದ್ರತೆಯನ್ನು ಒದಗಿಸಿದ್ದರು. ಈಗ ಫೈನಲ್ ಪಂದ್ಯದ ಫಲಿತಾಂಶದ ಬಳಿಕವೂ ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ಪೊಲೀಸರು ಫ್ಯಾನ್ಸ್‌ಗೆ ಕಟ್ಟುನಿಟ್ಟಿನ ರೂಲ್ಸ್ ಹಾಕಿದ್ದಾರೆ.

ಬೆಂಗಳೂರು ಪೊಲೀಸರು ಜಾರಿಗೊಳಿಸಿರುವ ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಅತಿಯಾದ ಸಂಭ್ರಮಾಚರಣೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜಲಮಂಡಳಿ ಅಥವಾ ಸಂಬಂಧಪಟ್ಟ ಇಲಾಖೆಗಳ ಪೂರ್ವಾನುಮತಿ ಇಲ್ಲದೆ ನಗರದ ರಸ್ತೆ ಬದಿಗಳಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಎಲ್ಇಡಿ (LED) ಸ್ಕ್ರೀನ್‌ಗಳನ್ನು ಅಳವಡಿಸುವಂತಿಲ್ಲ.

ವಿಜಯೋತ್ಸವದ ಹೆಸರಿನಲ್ಲಿ ಎಲ್ಲೆಂದರಲ್ಲಿ ಪಟಾಕಿ ಸಿಡಿಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವ ಅಪಾಯಕಾರಿ ವಸ್ತುಗಳನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ. ಮುಖ್ಯವಾಗಿ ಜನಸಂದಣಿ ಹೆಚ್ಚಾಗಿರುವ ಪ್ರಮುಖ ರಸ್ತೆಗಳು ಮತ್ತು ಪ್ರದೇಶಗಳಲ್ಲಿ ಪ್ರತಿಯೊಬ್ಬರೂ ಶಾಂತಿ ಹಾಗೂ ಶಿಸ್ತನ್ನು ಪಾಲಿಸಬೇಕಾಗುತ್ತದೆ.

ಇನ್ನು ಸಂಚಾರ ವಿಭಾಗದ ಪೊಲೀಸರು ನೀಡುವ ಎಲ್ಲಾ ರೀತಿಯ ಸಲಹೆ ಮತ್ತು ಸೂಚನೆಗಳನ್ನು ಸಾರ್ವಜನಿಕರು ಹಾಗೂ ವಾಹನ ಸವಾರರು ಕಡ್ಡಾಯವಾಗಿ ಪಾಲಿಸಬೇಕು. ಗೆಲುವಿನ ಅಮಲಿನಲ್ಲಿ ರಸ್ತೆಗಿಳಿದು ಬೈಕ್ ರ್ಯಾಲಿ ಮಾಡುವುದು, ಅತಿವೇಗದ ಚಾಲನೆ, ವ್ಹೀಲಿಂಗ್‌ನಂತಹ ಸ್ಟಂಟ್‌ಗಳನ್ನು ಮಾಡುವುದು ಮತ್ತು ಕರ್ಕಶವಾಗಿ ಹಾರ್ನ್ ಮಾಡುವುದರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

ಯಾವುದೇ ಕಾರಣಕ್ಕೂ ಮುಖ್ಯ ರಸ್ತೆಗಳನ್ನು ತಡೆದು ಸಂಭ್ರಮಾಚರಣೆ ನಡೆಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಮಹಿಳೆಯರು ಮತ್ತು ನಾಗರಿಕರ ಎದುರು ಅಸಭ್ಯವಾಗಿ ವರ್ತಿಸಿದರೆ ತಕ್ಷಣವೇ ಅರೆಸ್ಟ್ ಮಾಡಲಾಗುವುದು.

 

ಇದರೊಂದಿಗೆ ಸೋಶಿಯಲ್ ಮೀಡಿಯಾದಲ್ಲೂ ಪೊಲೀಸರ ಸೈಬರ್ ವಿಭಾಗದ ಕಣ್ಣಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಶಾಂತಿ ಸೃಷ್ಟಿಸುವ ಅಥವಾ ದ್ವೇಷಪೂರಿತ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಪಂದ್ಯದ ಫಲಿತಾಂಶ ಏನೇ ಬಂದರೂ ಅದರ ಹೆಸರಿನಲ್ಲಿ ಎದುರಾಳಿ ಅಥವಾ ಬೇರೆ ತಂಡದ ಅಭಿಮಾನಿಗಳನ್ನು ವೈಯಕ್ತಿಕವಾಗಿ ನಿಂದಿಸಬಾರದು ಎಂದು ಪೊಲೀಸರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸಿ: ಕಮಿಷನರ್ ಎಚ್ಚರಿಕೆ

ಕ್ರಿಕೆಟ್ ಎಂಬುದು ಒಂದು ಮನರಂಜನೆ, ಹೀಗಾಗಿ ಕ್ರೀಡೆಯನ್ನು ಕ್ರೀಡೆಯಾಗಿ ಮಾತ್ರ ಸ್ವೀಕರಿಸಿ ಪ್ರತಿಯೊಬ್ಬರೂ ಜವಾಬ್ದಾರಿಯುತ ನಾಗರಿಕರಂತೆ ವರ್ತಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಪೊಲೀಸರು ನೀಡಿರುವ ಈ ಎಲ್ಲಾ ಗೈಡ್‌ಲೈನ್ಸ್‌ಗಳನ್ನು ಮೀರಿ ಯಾರಾದರೂ ರಸ್ತೆಗಳಲ್ಲಿ ಹುಚ್ಚಾಟ, ಗಲಾಟೆ ಅಥವಾ ಕಾನೂನು ಕೈಗೆತ್ತಿಕೊಳ್ಳಲು ಯತ್ನಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಗ್ಯಾರಂಟಿ ಎಂದು ನಗರ ಪೊಲೀಸ್ ಆಯುಕ್ತರು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!