ಬೆಂಗಳೂರು: ನಗರದ ಚಿಕ್ಕಪೇಟೆಯಲ್ಲಿ ನಡೆಯುವ ಪ್ರಖ್ಯಾತ ಧರ್ಮರಾಯನ ಕರಗ ಗುರುವಾರ ಮಧ್ಯರಾತ್ರಿ ಪ್ರಾರಂಭವಾಗಲಿದೆ. ಈ ಪ್ರಸಿದ್ಧ ಉತ್ಸವದಲ್ಲಿ ಭಾಗವಹಿಸಲು ಈಗಾಗಲೇ ಲಕ್ಷಾಂತರ ಮಂದಿ ನೆರೆದಿದ್ದಾರೆ. ಪ್ರತಿಬಾರಿಯಂತೆ ಇಂದೂ ಸಹ ಧರ್ಮರಾಯನ ದೇಗುಲದ ಅರ್ಚಕ ಜ್ಞಾನೇಂದ್ರ ಧರ್ಮರಾಯನ ಕರಗವನ್ನು ಹೊರಲಿದ್ದಾರೆ.
ಗುರುವಾರ ರಾತ್ರಿ 12.30 ಕ್ಕೆ ಕರಗ ದೇವಾಲಯದಿಂದ ಹೊರಡಲಿದ್ದು, ವೀರಕುಮಾರರ ಖಡ್ಗದ ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸರ್ವಧರ್ಮ ಸೌಹಾರ್ದತೆಗೆ ಸಾಕ್ಷಿಯಾಗಲಿರುವ ಕರಗ ಎಂದಿನಂತೆ ಮುಸ್ಲಿಮರ ದರ್ಗಾ ಹಾಗೂ ಕ್ರೈಸ್ತರ ಮಸೀದಿಗೂ ಸಹ ತೆರಳಿ ಪೂಜೆ ಸ್ವೀಕರಿಸಲಿದೆ.
ಶಾಕ್ತ್ಯ ಪಂಥದ ಆರಾಧನೆಯಾಗಿರುವ ಈ ಕರಗದಲ್ಲಿ ಹನ್ನೊಂದು ದಿನವೂ ನೈವೇದ್ಯಕ್ಕೆ ಬಳಸುವ ಪದಾರ್ಥಗಳನ್ನು ಸ್ತ್ರೀಯರೇ ತಯಾರಿಸುವುದು ಮತ್ತೊಂದು ವಿಶೇಷ. ಜೊತೆಗೆ ಕರಗ ಹಾಗೂ ವೀರಕುಮಾರರ ಮೇಲೆ ಪುಷ್ಪವೃಷ್ಟಿ ನಡೆಸಲು ದುಂಡುಮಲ್ಲಿಗೆಯನ್ನು ಮಾತ್ರ ಬಳಸುತ್ತಾರೆ. ಮಲ್ಲಿಗೆ ಹೊರತು ಪಡಿಸಿ ಇಂದು ಬೇರಾವ ಹೂವಿಗೂ ಪ್ರಾಧಾನ್ಯತೆಯಿಲ್ಲ.
ಏ.3 ರಿಂದ ಆರಂಭವಾಗಿರುವ ಕರಗ ಮಹೋತ್ಸವ ಏ.8 ರ ಶನಿವಾರದಂದು ಮುಕ್ತಾಯಗೊಳ್ಳಲಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಈಗಾಗಲೇ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.