ಬೆಂಗಳೂರು: ಸಿಲಿಕಾನ್ ಸಿಟಿ (Bengaluru) ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಆನೇಕಲ್ (Anekal) ಭಾಗದ ಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ)(KHB) ವತಿಯಿಂದ ಸೂರ್ಯನಗರದ ನಾಲ್ಕನೇ ಹಂತದಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಕ್ರಿಕೆಟ್ ಸ್ಟೇಡಿಯಂ (International Cricket Stadium) ಯೋಜನೆಗೆ ಕೊನೆಗೂ ಕಾಲಕೂಡಿ ಬಂದಿದ್ದು, ಮೇ 23 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಹೌದು, ಆನೇಕಲ್ ತಾಲೂಕಿನ ಸೂರ್ಯನಗರ ನಾಲ್ಕನೇ ಹಂತದ (ಇಂಡ್ಲವಾಡಿ) ಸುಮಾರು 75 ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಬೃಹತ್ ಸ್ಟೇಡಿಯಂ ತಲೆಎತ್ತಲಿದೆ. ಬರೋಬ್ಬರಿ 80,000 ಆಸನ ಸಾಮರ್ಥ್ಯದ ಈ ಕ್ರೀಡಾಂಗಣದ ನಿರ್ಮಾಣಕ್ಕೆ ರಾಜ್ಯ ಸರಕಾರ ಈಗಾಗಲೇ ಹಸಿರು ನಿಶಾನೆ ತೋರಿಸಿದೆ.
ಮೊದಲ ಹಂತದಲ್ಲಿ ಕೆಎಚ್‌ಬಿ 950 ಕೋಟಿ ರೂ. ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ, ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಗೂ ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಮೇ 16ರ ಶನಿವಾರದಂದು ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದೆ. ಮಂಡಳಿಯು ಶೀಘ್ರದಲ್ಲೇ ಟೆಂಡರ್ ಅಂತಿಮಗೊಳಿಸಲಿದೆ.
ಕಳೆದ ವರ್ಷ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಹಿತಕರ ದುರಂತದ ಬಳಿಕ, ಅಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಆನೇಕಲ್ ಭಾಗದಲ್ಲಿ ಕ್ರೀಡಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ದೂರದೃಷ್ಟಿಯ ಯೋಜನೆಯನ್ನು ರೂಪಿಸಲಾಗಿತ್ತು.
ಪ್ರಸ್ತುತ ಅಹಮದಾಬಾದ್‌ನಲ್ಲಿರುವ 1.10 ಲಕ್ಷ ಆಸನ ಸಾಮರ್ಥ್ಯದ ‘ನರೇಂದ್ರ ಮೋದಿ ಸ್ಟೇಡಿಯಂ’ ದೇಶದ ಅತಿ ದೊಡ್ಡ ಕ್ರೀಡಾಂಗಣವಾಗಿದೆ. ಇದರ ಬೆನ್ನಲ್ಲೇ ಸೂರ್ಯನಗರದಲ್ಲಿ ನಿರ್ಮಾಣವಾಗಲಿರುವ ಈ ಹೊಸ ಸ್ಟೇಡಿಯಂ ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಕ್ರೀಡಾಂಗಣದ ವಿನ್ಯಾಸಕ್ಕೆ 3 ತಿಂಗಳು ಹಾಗೂ ಒಟ್ಟಾರೆ ಕಾಮಗಾರಿ ಪೂರ್ಣಗೊಳಿಸಲು 33 ತಿಂಗಳ ಗಡುವನ್ನು ವಿಧಿಸಲಾಗಿದೆ.
ಇನ್ನು, ಸರ್ಕಾರದ ಅನುಮತಿ ಸಿಕ್ಕರೆ, ಎರಡನೇ ಹಂತದಲ್ಲಿ ಇಲ್ಲಿ ಬೃಹತ್ ‘ಬಹುಕ್ರೀಡಾ ಸಮುಚ್ಚಯ’ (Multi-sports complex) ನಿರ್ಮಿಸುವ ಆಲೋಚನೆಯೂ ಕೆಎಚ್‌ಬಿ ಮುಂದಿದೆ. ಮೇ 23ರಂದು ನಡೆಯಲಿರುವ ಇದೇ ಭವ್ಯ ಕಾರ್ಯಕ್ರಮದಲ್ಲಿ ಕೆಎಚ್‌ಬಿ ಅಭಿವೃದ್ಧಿಪಡಿಸಿರುವ ನೂತನ ಬಡಾವಣೆಗಳ ನಿವೇಶನ ಹಂಚಿಕೆ ಪ್ರಕ್ರಿಯೆಗೂ ಚಾಲನೆ ಸಿಗಲಿದೆ.
ಮಂಡಳಿಯು ಒಟ್ಟು 1200 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ನಿವೇಶನಗಳನ್ನು ಸಿದ್ಧಪಡಿಸಿದ್ದು, ಇವುಗಳನ್ನು 50:50 ಅನುಪಾತದಲ್ಲಿ ವಿತರಿಸಲಾಗುತ್ತದೆ. ಅಂದರೆ, ಶೇಕಡಾ 50ರಷ್ಟು ನಿವೇಶನಗಳನ್ನು ಭೂಮಿ ನೀಡಿದ ರೈತರಿಗೆ ಹಾಗೂ ಉಳಿದ ಶೇಕಡಾ 50ರಷ್ಟು ನಿವೇಶನಗಳನ್ನು ಅರ್ಜಿ ಸಲ್ಲಿಸಿರುವ ಸಾರ್ವಜನಿಕ ಗ್ರಾಹಕರಿಗೆ ‘ಇ-ಲಾಟರಿ’ (e-Lottery) ಮುಖಾಂತರ ಅತ್ಯಂತ ಪಾರದರ್ಶಕವಾಗಿ ಹಂಚಿಕೆ ಮಾಡಲು ಮಂಡಳಿ ನಿರ್ಧರಿಸಿದೆ.