ಬೆಂಗಳೂರು: ಮ್ಯಾನ್ ಹೋಲ್‌ಗೆ (Manhole) ಇಳಿದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 21 ರಂದು ನಡೆದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ 21 ರಂದು ಬೆಂಗಳೂರನ ಆರ್ಎಂಸಿ ಯಾರ್ಡ್ನ ಆಶ್ರಯ ನಗರದಲ್ಲಿ ಪುಟ್ಟಸ್ವಾಮಿ ಎಂಬಾತನಿಗೆ ಹಣದ ಆಸೆ ತೋರಿಸಿ ಆಶ್ರಯ ನಗರದ ನಿವಾಸಿಗಳಾದ ನಾಗರಾಜ್, ಆಂಥೋನಿ, ದೇವರಾಜ್ ಮತ್ತು ಆನಂದ್ ಮ್ಯಾನ್ ಹೋಲ್‌ಗೆ ಇಳಿಸಿದ್ದರು. ಪುಟ್ಟಸ್ವಾಮಿ ಒಂದೂವರೆ ಸಾವಿರ ರೂ. ಪಡೆದು ಮ್ಯಾನ್ ಹೋಲ್‌ಗೆ ಇಳಿದಿದ್ದ.
ಪುಟ್ಟಸ್ವಾಮಿ ನಾಲ್ವರು ಮ್ಯಾನ್ ಹೋಲ್‌ಗೆ ಇಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ಲೀನ್ ಮಾಡಲು ಹೇಳಿದ್ದರು. ಸುಮಾರು ಅರ್ಧ ಗಂಟೆ ಮ್ಯಾನ್ ಹೋಲ್ ಒಳಗಡೆಯೇ ಇದ್ದ ಪುಟ್ಟಸ್ವಾಮಿಗೆ ಉಸಿರುಗಟ್ಟಿದಂತಾಗಿತ್ತು. ನಂತರ ಅವರು ಮ್ಯಾನ್ ಹೋಲ್‌ನಿಂದ ಹೊರಬಂದರೂ ಮನೆಗೆ ತೆರಳಿ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಆದರೆ ರಾತ್ರಿ ಮಲಗಿದ್ದ ಪುಟ್ಟಸ್ವಾಮಿ ಬೆಳಗ್ಗೆ ಆಗುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಮ್ಯಾನ್ ಹೋಲ್‌ಗೆ ಕಾರ್ಮಿಕರನ್ನು ಇಳಿಸಬಾರದೆಂಬ ಕಟ್ಟುನಿಟ್ಟಿನ ಆದೇಶವಿದ್ದರೂ ಇದನ್ನು ಉಲ್ಲಂಘಿಸಿ ವ್ಯಕ್ತಿಯನ್ನು ಮ್ಯಾನ್ ಹೋಲ್‌ಗೆ ಇಳಿಸಿದ್ದರಿಂದ ಇದೀಗ ಪೊಲೀಸರು ಆರೋಪಿಗಳಾದ ನಾಗರಾಜ್, ಆಂಥೋನಿ, ದೇವರಾಜ್ ಮತ್ತು ಆನಂದ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.