ಬೆಂಗಳೂರು: ತಮಗಿಷ್ಟವಾದ ಸಿಗರೇಟ್ (Cigarette) ತಂದುಕೊಡಲು ನಿರಾಕರಿಸಿದ ಕಾರಣಕ್ಕೆ ರೈತನೊಬ್ಬನ ಮೇಲೆ ಕಲ್ಲಿನಿಂದ ಹಲ್ಲೆ (Crime) ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲೂಕಿನ ಕೊಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಈ ಗಲಾಟೆಗೆ ಸಂಬಂಧಿಸಿದಂತೆ ಸದ್ಯ ಕೊಡಿಹಳ್ಳಿ ಪೊಲೀಸರು ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲ್ಲಿಗೌಡನದೊಡ್ಡಿ ಗ್ರಾಮದ ನಿವಾಸಿಯಾದ ಗಣೇಶ ಎನ್. (24) ಎಂಬ ಯುವ ರೈತ ಹಲ್ಲೆಗೊಳಗಾದ ದುರ್ದೈವಿಯಾಗಿದ್ದು, ಈತ ಜುಲೈ 12 ರಂದು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾನೆ. ದೂರಿನ ಅನ್ವಯ, ಇದೇ ಗ್ರಾಮದ ನಿವಾಸಿಯಾಗಿರುವ ನಾಗೇಶ ಎಂಬಾತ ಜುಲೈ 10 ರಂದು ರಾತ್ರಿ 8.30 ರ ಸುಮಾರಿಗೆ ರಸ್ತೆಯಲ್ಲಿ ಸಿಕ್ಕಾಗ ತನಗೆ ಸಿಗರೇಟ್ ತಂದುಕೊಡುವಂತೆ ಗಣೇಶನಿಗೆ ಗದರಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಸಣ್ಣ ಮಾತಿನ ಚಕಮಕಿ ನಡೆದಿದ್ದು, ತನ್ನ ಬಳಿ ಹಣವಿಲ್ಲ ಎಂದು ಹೇಳಿ ಗಣೇಶ ಅಲ್ಲಿಂದ ಹೊರಟುಹೋಗಿದ್ದಾನೆ.
ಸಿಗರೇಟ್ ತಂದುಕೊಡಲಿಲ್ಲ ಎಂಬ ಕೋಪ ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ ನಾಗೇಶ, ಮರುದಿನ ಅಂದರೆ ಜುಲೈ 11 ರಂದು ರಾತ್ರಿ 8 ಗಂಟೆಗೆ ನೇರವಾಗಿ ಗಣೇಶನ ಮನೆಗೆ ನುಗ್ಗಿದ್ದಾನೆ. ನಿನ್ನೆ ನನಗೆ ಯಾಕೆ ಸಿಗರೇಟ್ ತಂದುಕೊಡಲಿಲ್ಲ ಎಂದು ಜಗಳ ತೆಗೆದ ನಾಗೇಶ, ಏಕಾಏಕಿ ಗಣೇಶನ ಶರ್ಟ್ ಕಾಲರ್ ಹಿಡಿದು ಮನಬಂದಂತೆ ತಳ್ಳಿ ಕೆಳಗೆ ಬೀಳಿಸಿದ್ದಾನೆ.
ಅಷ್ಟಕ್ಕೇ ನಿಲ್ಲಿಸದೆ, ಅಲ್ಲೇ ಬಿದ್ದಿದ್ದ ದೊಡ್ಡ ಕಲ್ಲನ್ನು ಎತ್ತಿಕೊಂಡ ನಾಗೇಶ, ಗಣೇಶನ ಹಣೆಗೆ ಜೋರಾಗಿ ಜಜ್ಜಿದ್ದಾನೆ. ಕಲ್ಲಿನ ಪೆಟ್ಟಿನಿಂದಾಗಿ ಗಣೇಶನ ತಲೆಯಿಂದ ರಕ್ತ ಒಸರಿದ್ದು, ಆತ ಜೋರಾಗಿ ಕಿರುಚಾಡಿದ್ದಾನೆ. ಯುವಕನ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ನೆರೆಹೊರೆಯವರು ತಕ್ಷಣ ಸ್ಥಳಕ್ಕೆ ಓಡಿಬಂದಿದ್ದಾರೆ. ಇದನ್ನು ನೋಡಿ ಆರೋಪಿ ನಾಗೇಶ ಅಲ್ಲಿಂದ ಕಾಲ್ಕಿತ್ತಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಗಣೇಶನನ್ನು ಗ್ರಾಮಸ್ಥರು ತಕ್ಷಣವೇ ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ಸಂತ್ರಸ್ತ ರೈತ ನೀಡಿದ ದೂರಿನ ಆಧಾರದ ಮೇಲೆ ಕೊಡಿಹಳ್ಳಿ ಪೊಲೀಸರು ಆರೋಪಿ ನಾಗೇಶ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಬಂಧನಕ್ಕಾಗಿ ತನಿಖೆ ಚುರುಕುಗೊಳಿಸಿದ್ದಾರೆ.